
ಕುಮಟಾ: ಕುಮಟಾ ಎಪಿಎಂಸಿ ಆವರಣದಲ್ಲಿ ಅಡಕೆ ಲೋಡ್ ಮಾಡುತ್ತಿದ್ದ ವೇಳೆ ಬೊಲೆರೋ ಪಿಕ್‌ಅಪ್ ವಾಹನದ ಡ್ಯಾಶ್‌ಬೋರ್ಡ್‌ನಲ್ಲಿಟ್ಟಿದ್ದ ₹48 ಸಾವಿರ ನಗದು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪ್ರಕರಣ ದಾಖಲಾದ 24 ಗಂಟೆಯೊಳಗೆ ಬಂಧಿಸುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಹಳೆಹುಬ್ಬಳ್ಳಿಯ ನೇಕಾರ ನಗರ ನಿವಾಸಿ ಹಾಗೂ ಹಾಲಿ ಮೂರೂರು ಕ್ರಾಸ್ ಬಳಿ ವಾಸವಿದ್ದ ಸೂರಜಕುಮಾರ ವಿಲಾಸ ದೇವಸ್ಕರ ಎಂದು ಗುರುತಿಸಲಾಗಿದೆ.
ಸೆ.1ರಂದು ಕುಮಟಾ ಪಟ್ಟಣದ ಎಪಿಎಂಸಿ ಆವರಣದಲ್ಲಿ ಹಳದೀಪುರ-ಪಳ್ಳಿಕೇರಿ ನಿವಾಸಿ ಹಾಗೂ ಅಡಕೆ ವ್ಯಾಪಾರಿ ಮೊಹಮ್ಮದ್ ಮುಕ್ತಿಯಾರ್ ಅಬ್ದುಲ್ ಖಾದರ ಖಾನ್ ಅವರು ತಮ್ಮ ಬೊಲೆರೋ ಪಿಕ್‌ಅಪ್ ವಾಹನದಲ್ಲಿ ಅಡಕೆ ಲೋಡ್ ಮಾಡುತ್ತಿದ್ದರು. ಈ ವೇಳೆ ವಾಹನದ ಡ್ಯಾಶ್‌ಬೋರ್ಡ್‌ನಲ್ಲಿ ಇಟ್ಟಿದ್ದ ₹48 ಸಾವಿರ ನಗದನ್ನು ಕಳ್ಳರು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಮೊಹಮ್ಮದ್ ಮುಕ್ತಿಯಾರ್ ಅವರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಕುಮಟಾ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಯ ಸುಳಿವು ಪತ್ತೆಹಚ್ಚಿದ್ದಾರೆ. ಪ್ರಕರಣ ದಾಖಲಾದ 24 ಗಂಟೆಯೊಳಗಾಗಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿತ ಸೂರಜಕುಮಾರ ವಿಲಾಸ ದೇವಸ್ಕರನಿಂದ ₹45 ಸಾವಿರ ನಗದು ಹಾಗೂ ಕಳ್ಳತನಕ್ಕೆ ಬಳಸಿದ್ದ ಯಮಾಹಾ ಎಫ್‌ಝಡ್ ಮೋಟಾರ್‌ಸೈಕಲ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಪತ್ತೆ ಕಾರ್ಯದಲ್ಲಿ ಪಿಐ ಯೋಗೇಶ ಕೆ.ಎಂ., ಪಿಎಸ್‌ಐ ವಿಠಲ ಮಲವಡಕರ ಹಾಗೂ ಸಿಬ್ಬಂದಿಗಳಾದ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ ಮತ್ತು ಕಿರಣ ನಾಯ್ಕ ಶ್ರಮಿಸಿದ್ದಾರೆ. ಕುಮಟಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
