UK Express Logo

ಕಾರವಾರ ತಾಲೂಕು ಅಭಿವೃದ್ಧಿಗೆ ₹1,500 ಕೋಟಿಗೂ ಅಧಿಕ ಅನುದಾನ ಬಿಡುಗಡೆ: ಶಾಸಕ ಸತೀಶ್ ಸೈಲ್

By UKExpress on 9/9/2026

ಕಾರವಾರ: ಕಾರವಾರ ತಾಲೂಕಿನಲ್ಲಿ 2023-24ನೇ ಸಾಲಿನಿಂದ ಇಲ್ಲಿಯವರೆಗೆ ವಿವಿಧ ಇಲಾಖೆಗಳ ಮೂಲಕ ರಸ್ತೆ, ಕಟ್ಟಡ, ಚರಂಡಿ, ಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಯೋಜನೆಗಳಿಗಾಗಿ ₹1,500 ಕೋಟಿಗೂ ಅಧಿಕ ಅನುದಾನ ಬಿಡುಗಡೆಯಾಗಿದೆ ಎಂದು ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ತಿಳಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆದ ತಾಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಕಾಮಗಾರಿಗಳು ಯಾವ ಹಂತದಲ್ಲಿವೆ ಎಂಬುದನ್ನು ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಕಾಮಗಾರಿಗಳ ವಿವರಗಳನ್ನು ಶಾಸಕರ ಕಚೇರಿ ಆವರಣದಲ್ಲಿ ಅಳವಡಿಸಿರುವ ಸ್ಕ್ರೀನ್ ಬೋರ್ಡ್‌ನಲ್ಲಿ ಪ್ರದರ್ಶಿಸುವುದರ ಜೊತೆಗೆ ಕಾಮಗಾರಿ ಸ್ಥಳಗಳಲ್ಲಿ ಕಡ್ಡಾಯವಾಗಿ ನಾಮಫಲಕ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ವಿವಿಧ ಇಲಾಖೆಗಳ ಹೊರಗುತ್ತಿಗೆ ನೌಕರರ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದ ಸೈಲ್, ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆ ಇರುವ ಇಲಾಖೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು. ಪರ್ಯಾಯ ಸಿಬ್ಬಂದಿ ನಿಯೋಜನೆಯಾಗುವವರೆಗೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡಬಾರದು ಎಂದರು.

ನಗರದ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ತಂತಿ ಹೊರತುಪಡಿಸಿ ಟಿವಿ ಕೇಬಲ್ ಹಾಗೂ ಇತರೆ ಕೇಬಲ್‌ಗಳು ನೇತಾಡುತ್ತಿರುವುದರಿಂದ ಅಪಾಯದ ಸಾಧ್ಯತೆ ಇದೆ. ಇಂತಹ ಕೇಬಲ್‌ಗಳನ್ನು ತೆರವುಗೊಳಿಸಲು ಹೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕಾರವಾರ–ಕೈಗಾ ರಸ್ತೆ ಕಾಮಗಾರಿ ಸಂಪೂರ್ಣ ಪೂರ್ಣಗೊಳ್ಳುವವರೆಗೆ 30 ಟನ್‌ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಆರ್‌ಟಿಒ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಜಿಲ್ಲೆ ಹೆಚ್ಚಿನ ಕರಾವಳಿ ಪ್ರದೇಶ ಹೊಂದಿರುವುದರಿಂದ ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಬೇಕು. ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ಸಹಾಯಧನ, ಮೀನುಗಾರರ ಸುರಕ್ಷತಾ ಕಿಟ್, ಮೀನು ಸಾಕಣೆ ಹಾಗೂ ಪಂಜರ ಮೀನು ಕೃಷಿ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಬೇಕು ಎಂದರು.

ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಹಾಗೂ ಮೂಲಸೌಕರ್ಯ ಒದಗಿಸುವುದರ ಜೊತೆಗೆ ರಾತ್ರಿ ವೇಳೆ ಉಪನ್ಯಾಸಕರನ್ನು ನಿಯೋಜಿಸಿ ಟ್ಯೂಷನ್ ತರಗತಿ ನಡೆಸಬೇಕು. ಆಹಾರದ ಗುಣಮಟ್ಟವನ್ನು ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದರು.

ಹಳಗಾ, ಉಳಗಾ ಹಾಗೂ ಕದ್ರಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರನ್ನು ನಿಯೋಜಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ತಾಲೂಕಿನ ಎಲ್ಲ ದೇವಸ್ಥಾನಗಳಲ್ಲಿ ವ್ಯವಸ್ಥಾಪನಾ ಸಮಿತಿಗಳನ್ನು ರಚಿಸಬೇಕು ಎಂದರು.

ಪಿಎಂಜಿಎಸ್‌ವೈ ಯೋಜನೆಯಡಿ ಅರಣ್ಯ ಪ್ರದೇಶದ ಮೂಲಕ ನಿರ್ಮಾಣವಾಗುವ ರಸ್ತೆಗಳಿಗೆ ಡಾಂಬರ್ ಬದಲಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಕಾರವಾರ ಭಾಗಕ್ಕೆ ಹೆಚ್ಚಿನ ರಸ್ತೆ ಕಾಮಗಾರಿಗಳನ್ನು ತರಲು ಪ್ರಯತ್ನಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕಾರವಾರ ಹಾಗೂ ಸದಾಶಿವಗಡದಲ್ಲಿ ಭಾನುವಾರದ ಸಂತೆಯಲ್ಲಿ ರಸ್ತೆಯ ಮೇಲೆಯೇ ತರಕಾರಿ ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಹಾಗೂ ಅಪಘಾತದ ಸಾಧ್ಯತೆ ಇದೆ. ಕಾರವಾರದಲ್ಲಿ ಎಪಿಎಂಸಿ ಮಾರುಕಟ್ಟೆ ಹಾಗೂ ಸದಾಶಿವಗಡದಲ್ಲಿ ರಸ್ತೆಯಿಂದ ಹೊರತಾದ ಸೂಕ್ತ ಸ್ಥಳದಲ್ಲಿ ಸಂತೆ ನಡೆಸಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ತಾಲೂಕಿನಲ್ಲಿ 30ಕ್ಕೂ ಹೆಚ್ಚು ಶಾಲೆಗಳು ಬಂದ್ ಆಗಿರುವ ಕುರಿತು ಶಿಕ್ಷಣ ಇಲಾಖೆಯಿಂದ ಮಾಹಿತಿ ಪಡೆದ ಶಾಸಕರು, ಬಂದ್ ಆಗಿರುವ ಶಾಲೆಗಳ ಜಾಗದ ವಿವರ ನೀಡುವಂತೆ ಸೂಚಿಸಿದರು. ಬಳಕೆಯಾಗದೆ ಇರುವ ಶಾಲಾ ಕಟ್ಟಡಗಳನ್ನು ಸ್ಪೋರ್ಟ್ಸ್ ಕ್ಲಬ್, ಗ್ರಂಥಾಲಯ ಸೇರಿದಂತೆ ಸಾರ್ವಜನಿಕ ಉಪಯೋಗದ ಚಟುವಟಿಕೆಗಳಿಗೆ ಬಾಡಿಗೆಗೆ ನೀಡುವ ಮೂಲಕ ಆದಾಯ ಗಳಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸೋಮಶೇಖರ ಮೇಸ್ತಾ, ತಹಶೀಲ್ದಾರ್ ನಿಶ್ಚಲ್ ನರೋನಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಪಿ. ಏನಗಗೌಡರ್, ಪೌರಾಯುಕ್ತ ಜಗದೀಶ ಹುಲಗಜ್ಜಿ, ಡಿವೈಎಸ್‌ಪಿ ಗಿರೀಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ರಾಜೇಂದ್ರ ರಾಣೆ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.