
ಶಿರಸಿ: ತಾಲೂಕಿನ ಬೊಮ್ಮನಳ್ಳಿ ಗ್ರಾಮದ ಅರಣ್ಯ ಸರ್ವೆ ನಂ. 325ರಲ್ಲಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಕೆತ್ತನೆ ಮಾಡುತ್ತಿದ್ದ ಆರೋಪದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಹೆಚ್. ಸೂರ್ಯವಂಶಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಿತ್‌ಕುಮಾರ ಚವ್ಹಾಣ ಅವರ ಮಾರ್ಗದರ್ಶನದಲ್ಲಿ, ಶಿರಸಿ ವಲಯ ಅರಣ್ಯಾಧಿಕಾರಿ ಭವ್ಯ ನಾಯ್ಕ ಅವರ ನೇತೃತ್ವದಲ್ಲಿ ಶುಕ್ರವಾರ ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ ಅಡೆಗದ್ದೆ ಗ್ರಾಮದ ಕೊಪ್ಪ ನಿವಾಸಿ ಮಾರುತಿ ಫಕೀರಪ್ಪ ಓಲೇಕಾರ (38) ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ 20.5 ಕೆ.ಜಿ. ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಪ್ರಕರಣದ ಮತ್ತೊಬ್ಬ ಆರೋಪಿ ಶಿರಸಿ ತಾಲೂಕಿನ ಮುರಕಿಕೊಡ್ಲು ನಿವಾಸಿ ವಿನಾಯಕ ಮರಾಠಿ (40) ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿಶ್ವನಾಥ ಅರಬಗೊಂಡ ಹಾಗೂ ಅರಣ್ಯ ಪಾಲಕರಾದ ಸಂತೋಷಕುಮಾರ ರಾಥೋಡ, ಪುಂಡಲೀಕ ತಾವರಖೇಡ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.
