UK Express Logo

ಎನ್. ರಾಮು ಹಿರೇಗುತ್ತಿಗೆ ‘ಇಂಡಿಯಾ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್–2026’

By UKExpress on 9/9/2026

ಕುಮಟಾ: ತಾಲೂಕಿನ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್‌ನ ಶಿಕ್ಷಕ ಎನ್. ರಾಮು ಹಿರೇಗುತ್ತಿ ಅವರು “India Business Excellence Award–2026”ರ Academic Leadership, Education and Social Services ಕ್ಷೇತ್ರದ ಶ್ರೇಷ್ಠತಾ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಶಿಕ್ಷಣ, ಸಮಾಜಸೇವೆ, ಪತ್ರಿಕಾ ಬರಹ, ಯುವ ಸಂಘಟನೆ, ಆರೋಗ್ಯ ಜಾಗೃತಿ, ಕಲೆ–ಸಂಸ್ಕೃತಿ ಹಾಗೂ ಮಾನವೀಯ ಸೇವಾ ಕ್ಷೇತ್ರಗಳಲ್ಲಿ ಅವರು ಸಲ್ಲಿಸುತ್ತಿರುವ ನಿರಂತರ ಕೊಡುಗೆಯನ್ನು ಗುರುತಿಸಿ ಈ ಪ್ರತಿಷ್ಠಿತ ಗೌರವ ನೀಡಲಾಗಿದೆ.

ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವ, ಕಲೆ, ಸಾಹಿತ್ಯ, ಸಂಗೀತ ಹಾಗೂ ಸಂಘಟನಾ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ರಾಮು ಅವರು ಆದರ್ಶ ವಿದ್ಯಾರ್ಥಿ, ಕಾಲೇಜು ಕಾರ್ಯದರ್ಶಿ ಹಾಗೂ ಬಿ.ಎಡ್. ಕಾಲೇಜಿನ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಕ್ರೀಡಾಪಟು, ನಿರೂಪಕ ಹಾಗೂ ಸಂಘಟಕರಾಗಿಯೂ ತಮ್ಮ ಪ್ರತಿಭೆ ಮೆರೆದಿದ್ದಾರೆ.

2001ರ ಕಾರವಾರ ಕರಾವಳಿ ಸ್ವಚ್ಛತಾ ಅಭಿಯಾನ, ಕರಾವಳಿ ಉತ್ಸವ ಸೇರಿದಂತೆ ಹಲವು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅವರು, ಶ್ರೀ ಬ್ರಹ್ಮ ಜಟಕ ಯುವಕ ಸಂಘದ ಅಧ್ಯಕ್ಷರಾಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಮಕ್ಕಳಲ್ಲಿ ಸ್ಥಳೀಯ ಕಲೆ–ಸಂಸ್ಕೃತಿಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಯಕ್ಷಗಾನ ತರಬೇತಿಗೂ ಪ್ರೋತ್ಸಾಹ ನೀಡಿದ್ದಾರೆ.

ಶಿಕ್ಷಕರಾಗಿ ಪಠ್ಯಜ್ಞಾನದ ಜೊತೆಗೆ ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯ, ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಹಾಗೂ ಸೃಜನಶೀಲ ಚಿಂತನೆಯನ್ನು ಬೆಳೆಸಲು ಅವರು ಶ್ರಮಿಸುತ್ತಿದ್ದಾರೆ. ಈ ಕಾರಣದಿಂದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ.

ರಾಮು ಅವರ ಸೇವೆಯನ್ನು ಗುರುತಿಸಿ ಈಗಾಗಲೇ ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಯುವ ಪ್ರಶಸ್ತಿ–2007, ಕರ್ನಾಟಕ ಸುವರ್ಣ ಶ್ರೀ ಪ್ರಶಸ್ತಿ–2010 ಹಾಗೂ ಶಿಕ್ಷಣ ಸೇವಾ ರತ್ನ ಪ್ರಶಸ್ತಿ–2024 ಸೇರಿದಂತೆ ಹಲವು ಗೌರವಗಳು ಸಂದಿವೆ.

ಇದೀಗ Academic Leadership, Education and Social Services ಕ್ಷೇತ್ರದ ‘India Business Excellence Award–2026’ ಸ್ವೀಕರಿಸಿರುವುದು ಅವರ ಶೈಕ್ಷಣಿಕ ಹಾಗೂ ಸಮಾಜಮುಖಿ ಸೇವಾ ಪಯಣಕ್ಕೆ ಮತ್ತೊಂದು ಮಹತ್ವದ ಗರಿಯಾಗಿದೆ.

ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್‌ನ ಎನ್. ರಾಮು ಹಿರೇಗುತ್ತಿ ಅವರಿಗೆ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿಯೂ ಲಭಿಸಿದ್ದು, ಗ್ರಾಮೀಣ ಭಾಗದಲ್ಲಿ ಶಿಕ್ಷಣ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡಿರುವ ಸೇವೆಗೆ ದೊರೆತ ವಿಶೇಷ ಮಾನ್ಯತೆಯಾಗಿದೆ.

ಅವರ ಸಾಧನೆಗೆ ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಹಿತೈಷಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.