UK Express Logo

ಅರ್ಚಕ ವಿಶ್ವೇಶ್ವರ ಭಟ್ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

By UKExpress on 9/9/2026

ಕುಮಟಾ: ನಗರದ ಪ್ರಸಿದ್ಧ ಕುಂಭೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶ್ವರ ಭಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಪ್ರಕರಣದ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

2018ರ ಅಕ್ಟೋಬರ್ 16ರಂದು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವಿಶ್ವೇಶ್ವರ ಭಟ್ ಅವರನ್ನು ಸಂಚು ರೂಪಿಸಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಮೃತರ ದೂರದ ಸಂಬಂಧಿ ಮಂಜುನಾಥ ಈಶ್ವರ ಹೆಗಡೆ, ಆತನ ತಂಗಿಯ ಮಗ ಹರೀಶ್ ಹೆಗಡೆ ಹಾಗೂ ಸೊರಬ ಮೂಲದ ಧನಂಜಯ ನಾಯ್ಕ ಆರೋಪಿಗಳಾಗಿದ್ದರು.

ಪೂಜೆಯ ನೆಪದಲ್ಲಿ ಮೂರೂರಿನಲ್ಲಿ ಜಮೀನು ಪೂಜೆ ಇದೆ ಎಂದು ವಿಶ್ವೇಶ್ವರ ಭಟ್ ಅವರನ್ನು ನಂಬಿಸಿ ಆರೋಪಿಗಳು ಕರೆದುಕೊಂಡು ಹೋಗಿದ್ದರು. ಬಳಿಕ ಕೂಜಳ್ಳಿಯಲ್ಲಿರುವ ಮಂಜುನಾಥ ಹೆಗಡೆ ಅವರ ತೋಟದಲ್ಲಿ ಮಾರಕಾಸ್ತ್ರದಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿತ್ತು. ನಂತರ ಶವವನ್ನು ತೋಟದಲ್ಲಿಯೇ ಹೂತುಹಾಕಿ, ಮೃತರ ಬೈಕ್‌ ಅನ್ನು ತೋಟದ ಬಾವಿಗೆ ಎಸೆದು ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.

ವಿಶ್ವೇಶ್ವರ ಭಟ್ ನಾಪತ್ತೆಯಾಗಿರುವ ಕುರಿತು ಅವರ ಪತ್ನಿ ಸರಸ್ವತಿ ಭಟ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು. ಅಂದಿನ ಸಿಪಿಐ ಸಂತೋಷ್ ಶೆಟ್ಟಿ ಹಾಗೂ ಪಿಎಸ್‌ಐ ಸಂಪತ್ ಕುಮಾರ್ ನೇತೃತ್ವದ ತಂಡ ತನಿಖೆ ನಡೆಸಿ ಪ್ರಕರಣವನ್ನು ಭೇದಿಸಿತ್ತು. ಬಳಿಕ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಸಾಕ್ಷ್ಯಾಧಾರಗಳು ಹಾಗೂ ವಾದ-ಪ್ರತಿವಾದಗಳನ್ನು ಪರಿಶೀಲಿಸಿದ ಬಳಿಕ ಮೂವರು ಆರೋಪಿಗಳೂ ತಪ್ಪಿತಸ್ಥರೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ಸರ್ಕಾರದ ಪರವಾಗಿ ಎಪಿಪಿ ತನುಜಾ ಹೊಸಪಟ್ಟಣ ಅವರು ವಾದ ಮಂಡಿಸಿದ್ದರು.

ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಮೃತ ವಿಶ್ವೇಶ್ವರ ಭಟ್ ಅವರ ಪತ್ನಿ ಹಾಗೂ ಬಂಧುಗಳು, ಅಮಾಯಕ ವ್ಯಕ್ತಿಯನ್ನು ನಂಬಿಸಿ ಕರೆದುಕೊಂಡು ಹೋಗಿ ಕೊಲೆ ಮಾಡಿದ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂಬುದು ತಮ್ಮ ಆಶಯವಾಗಿತ್ತು ಎಂದು ತಿಳಿಸಿದ್ದಾರೆ.

ಆದರೆ, ಸುಮಾರು ಎಂಟು ವರ್ಷಗಳ ಸತತ ಹೋರಾಟದ ಬಳಿಕ ನ್ಯಾಯಾಲಯ ನೀಡಿರುವ ತೀರ್ಪನ್ನು ಗೌರವಿಸುವುದಾಗಿ ಅವರು ಹೇಳಿದ್ದಾರೆ. ಪ್ರಕರಣದ ತನಿಖೆಗೆ ಸಹಕರಿಸಿದ ಅಂದಿನ ಸಿಪಿಐ ಸಂತೋಷ್ ಶೆಟ್ಟಿ, ಪಿಎಸ್‌ಐ ಸಂಪತ್ ಕುಮಾರ್ ಸೇರಿದಂತೆ ಪೊಲೀಸ್ ಸಿಬ್ಬಂದಿ, ಪ್ರಕರಣದ ವರದಿ ಮಾಡಿದ ಮಾಧ್ಯಮಗಳು ಹಾಗೂ ಪತ್ರಿಕೆಗಳು, ನ್ಯಾಯಮೂರ್ತಿಗಳು ಮತ್ತು ಸರ್ಕಾರದ ಪರವಾಗಿ ವಾದ ಮಂಡಿಸಿದ ಎಪಿಪಿ ತನುಜಾ ಹೊಸಪಟ್ಟಣ ಅವರಿಗೆ ಕುಟುಂಬಸ್ಥರು ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಿದ್ದಾರೆ.