30 ನಿಮಿಷದಲ್ಲೇ 42 ಗ್ರಾಂ ಚಿನ್ನದ ಮಾಂಗಲ್ಯ ಸರ ಪತ್ತೆ: ಕುಮಟಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ಕುಮಟಾ: ಕಾಣೆಯಾಗಿದ್ದ ಸುಮಾರು 42 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಕೇವಲ 30 ನಿಮಿಷಗಳೊಳಗೆ ಪತ್ತೆಹಚ್ಚಿ ವಾರಸುದಾರರಿಗೆ ಸುರಕ್ಷಿತವಾಗಿ ಹಸ್ತಾಂತರಿಸುವ ಮೂಲಕ ಕುಮಟಾ ಪೊಲೀಸರು ಕರ್ತವ್ಯನಿಷ್ಠೆ ಹಾಗೂ ಸಮಯಪ್ರಜ್ಞೆ ಮೆರೆದಿದ್ದಾರೆ.
ಉಡುಪಿಯ ಬ್ರಹ್ಮಾವರ ನಿವಾಸಿ ಸುಪ್ರಿಯ (36) ಅವರು ಕುಟುಂಬ ಸಮೇತರಾಗಿ ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ತೆರಳುವ ಸಂದರ್ಭದಲ್ಲಿ ಬ್ರಹ್ಮಾವರ ರೈಲು ನಿಲ್ದಾಣದಿಂದ ರೈಲಿನಲ್ಲಿ ಕುಮಟಾಕ್ಕೆ ಆಗಮಿಸಿದ್ದರು. ಸಂಜೆ ಸುಮಾರು 5.30ಕ್ಕೆ ಕುಮಟಾ ರೈಲು ನಿಲ್ದಾಣ ತಲುಪಿ, ಬಳಿಕ ಶಿರಸಿಗೆ ತೆರಳಲು ಕುಮಟಾ ಬಸ್ ನಿಲ್ದಾಣಕ್ಕೆ ಬಂದಿದ್ದರು.
ಬಸ್‌ಗಾಗಿ ಕಾಯುತ್ತಿದ್ದ ವೇಳೆ ಸುಪ್ರಿಯ ಅವರ ಕತ್ತಿನಲ್ಲಿದ್ದ ಸುಮಾರು 42 ಗ್ರಾಂ ಚಿನ್ನದ ಮಾಂಗಲ್ಯ ಸರ ಕಾಣೆಯಾಗಿರುವುದು ತಾಯಿಯ ಗಮನಕ್ಕೆ ಬಂದಿದೆ. ತಕ್ಷಣ ಕುಟುಂಬಸ್ಥರು ಕುಮಟಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಮಾಹಿತಿ ದೊರೆತ ಕೂಡಲೇ ಕುಮಟಾ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಬಸ್ ನಿಲ್ದಾಣಕ್ಕೆ ತೆರಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಸಹಕಾರದೊಂದಿಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಕೇವಲ 30 ನಿಮಿಷಗಳಲ್ಲಿ ಕಾಣೆಯಾಗಿದ್ದ ಚಿನ್ನದ ಸರವನ್ನು ಪತ್ತೆಹಚ್ಚಿದರು.
ನಂತರ ಮಾಂಗಲ್ಯ ಸರವನ್ನು ಸುಪ್ರಿಯ ಅವರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು. ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಆತಂಕಕ್ಕೊಳಗಾಗಿದ್ದ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಈ ಕಾರ್ಯಾಚರಣೆಯಲ್ಲಿ ಕುಮಟಾ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಗಣೇಶ್ ನಾಯ್ಕ್, ದಯಾನಂದ ನಾಯ್ಕ್, ಕಿರಣ್ ನಾಯ್ಕ್ ಹಾಗೂ ಗುರು ನಾಯಕ್ ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳಾದ ಗಂಗಾಧರ ವೈದ್ಯ ಹಾಗೂ ಉದಯ ಹಾದಿಮನಿ ಅವರು ಸಹಕರಿಸಿದರು.
ಪೊಲೀಸರ ಸಮಯಪ್ರಜ್ಞೆ, ಕರ್ತವ್ಯನಿಷ್ಠೆ ಹಾಗೂ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
