UK Express Logo

ಕುಮಟಾ ಬಸ್ ನಿಲ್ದಾಣದ ಜೇಬುಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು

By UKExpress on 9/9/2026

ಕುಮಟಾ: ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣದಲ್ಲಿ ನಡೆದ ಜೇಬುಗಳ್ಳತನ ಪ್ರಕರಣವನ್ನು ಕುಮಟಾ ಪೊಲೀಸರು ಕೇವಲ 9 ದಿನಗಳಲ್ಲಿ ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆ.18ರಂದು ಮಧ್ಯಾಹ್ನ 1.45 ರಿಂದ 2 ಗಂಟೆಯ ನಡುವೆ ಚಿಕ್ಕೊಳ್ಳಿ ನಿವಾಸಿ, ಹೆಲ್ತ್ ವರ್ಕರ್ ಭಾರತಿ ಶಿವು ನಾಯಕ (59) ಅವರು ಬಸ್ ಹತ್ತುತ್ತಿದ್ದ ವೇಳೆ ಜನಜಂಗುಳಿಯ ಲಾಭ ಪಡೆದ ಕಳ್ಳರು ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಮಾಂಗಲ್ಯ ಸರದ ಪರ್ಸ್‌ನ್ನು ಕಳವು ಮಾಡಿ ಪರಾರಿಯಾಗಿದ್ದರು. ಈ ಕುರಿತು ಆ.19ರಂದು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕುಮಟಾ ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆ ಅಳವಡಿಸಿರುವ 100ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಶಂಕಿತರ ಚಲನವಲನದ ಆಧಾರದ ಮೇಲೆ ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.

ಆ.28ರಂದು ಬೆಳಿಗ್ಗೆ ಬಡಾಳ–ಸೊಪ್ಪಿನಹೊಸಳ್ಳಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸೀಮಾಬಾನು (42) ಹಾಗೂ ಶಮ್ಮಾ ಬುಡಿಯಾ (27) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದು, ಅವರಿಂದ 20.180 ಗ್ರಾಂ ತೂಕದ ಅಂದಾಜು ₹2.60 ಲಕ್ಷ ಮೌಲ್ಯದ ಬಂಗಾರದ ಕರಿಮಣಿ ಸರವನ್ನು ಪೊಲೀಸರು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ.

ಕುಮಟಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಯೋಗೇಶ ಕೆ.ಎಂ. ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿ ಗಣೇಶ ನಾಯ್ಕ, ದಯಾನಂದ ನಾಯ್ಕ, ಕಿರಣ ನಾಯ್ಕ ಮತ್ತು ಗುರು ನಾಯಕ ಅವರು ಕಾರ್ಯಾಚರಣೆಯಲ್ಲಿ ಶ್ರಮಿಸಿದ್ದಾರೆ.

ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಡಿವೈಎಸ್‌ಪಿ ಬಿ. ಗಿರೀಶ್ ಅವರು ಶ್ಲಾಘಿಸಿದ್ದಾರೆ.

ಜನಜಂಗುಳಿ ಪ್ರದೇಶಗಳಲ್ಲಿ ಬೆಲೆಬಾಳುವ ವಸ್ತುಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಹಾಗೂ ಅನುಮಾನಾಸ್ಪದ ಘಟನೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಕುಮಟಾ ಪೊಲೀಸರು ಮನವಿ ಮಾಡಿದ್ದಾರೆ.