UK Express Logo

ಆರೋಳ್ಳಿ ಸೇತುವೆ ಬಳಿ ನಿಯಂತ್ರಣ ತಪ್ಪಿ ಹಾಲಿನ ಟ್ಯಾಂಕರ್ ಪಲ್ಟಿ

By UKExpress on 9/9/2026

ಹೊನ್ನಾವರ: ಹಾಲು ಸಾಗಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ತಾಲೂಕಿನ ಆರೋಳ್ಳಿ ಸೇತುವೆ ಬಳಿ ಬುಧವಾರ ರಾತ್ರಿ ನಡೆದಿದೆ.

ಹಿರೇಕೆರೂರು ಸಮೀಪ ಟ್ಯಾಂಕರ್‌ಗೆ ಹಾಲು ತುಂಬಿಸಿಕೊಂಡು ಕೇರಳದತ್ತ ತೆರಳುತ್ತಿದ್ದ ವೇಳೆ ಆರೋಳ್ಳಿ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದೆ. ಬಳಿಕ ಟ್ಯಾಂಕರ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಕಂಬ ಸಮೇತ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ.

ಟ್ಯಾಂಕರ್ ಪಲ್ಟಿಯಾದ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ವಾಹನದೊಳಗೆ ಸಿಲುಕಿದ್ದ ಚಾಲಕ ರಾಕೇಶ್ ಅವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ಅಪಘಾತದ ಪರಿಣಾಮ ಟ್ಯಾಂಕರ್‌ನಲ್ಲಿದ್ದ ಅಪಾರ ಪ್ರಮಾಣದ ಹಾಲು ರಸ್ತೆಗೆ ಹರಿದು ಚರಂಡಿ ಸೇರಿದೆ.

ಘಟನೆ ತಿಳಿದು ಪೊಲೀಸ್ ವೃತ್ತ ನಿರೀಕ್ಷಕ ಸಿದ್ಧರಾಮೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಂಡಿದ್ದಾರೆ.