UK Express Logo

ಬೇಡ್ತಿ–ಅಘನಾಶಿನಿ ಹೋರಾಟಕ್ಕೆ ಕರಾವಳಿ ಜನರು ಕೈಜೋಡಿಸಿ: ಸ್ವರ್ಣವಲ್ಲೀ ಶ್ರೀ

By UKExpress on 9/9/2026

ಶಿರಸಿ: ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಅಗತ್ಯವಿದ್ದು, ಕರಾವಳಿ ಭಾಗದ ಜನರು ಸಂಪೂರ್ಣವಾಗಿ ಕೈಜೋಡಿಸಿ ಚಳುವಳಿಯನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಕರೆ ನೀಡಿದರು.

ಸ್ವರ್ಣವಲ್ಲೀ ಮಠದಲ್ಲಿ ಬುಧವಾರ ನಡೆದ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಜನೆ ವಿರುದ್ಧದ ಹೋರಾಟವನ್ನು ಸಮರೋಪಾದಿಯಲ್ಲಿ ಇನ್ನಷ್ಟು ಬಲಪಡಿಸಬೇಕಿದೆ. ವಿಶೇಷವಾಗಿ ಕರಾವಳಿ ಭಾಗದ ಜನರು ಒಗ್ಗಟ್ಟಿನಿಂದ ಹೋರಾಟದಲ್ಲಿ ಭಾಗವಹಿಸುವ ಮೂಲಕ ಚಳುವಳಿಯನ್ನು ಯಶಸ್ವಿಗೊಳಿಸಬೇಕು ಎಂದರು.

ಸಭೆಯಲ್ಲಿ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಬೆಂಗಳೂರಿನಲ್ಲಿ ಎನ್‌ಡಬ್ಲ್ಯೂಡಿಎ ವಿಜ್ಞಾನಿಗಳೊಂದಿಗೆ ನಡೆದ ಚರ್ಚೆಯ ಕುರಿತು ಮಾಹಿತಿ ನೀಡಿದರು. ತಮ್ಮ ನಿಯೋಗದಲ್ಲಿದ್ದ ತಜ್ಞರು ಮುಂದಿಟ್ಟ ಹಲವು ಪ್ರಶ್ನೆಗಳಿಗೆ ಎನ್‌ಡಬ್ಲ್ಯೂಡಿಎ ವಿಜ್ಞಾನಿಗಳು ಸಮರ್ಪಕ ಉತ್ತರ ನೀಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಜನಜಾಗೃತಿ ಕಾರ್ಯದ ಕುರಿತು ವಿಶ್ವನಾಥ ಶೀಗೇಹಳ್ಳಿ ಹಾಗೂ ಪ್ರಮೋದ್ ವೈದ್ಯ ಮತ್ತಿಘಟ್ಟ ಮಾತನಾಡಿ, ಹೋರಾಟಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಜನರಿಂದ ವ್ಯಾಪಕ ಬೆಂಬಲ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.

ಯೋಜನೆ ವಿರೋಧಿ ಹೋರಾಟವನ್ನು ವ್ಯವಸ್ಥಿತವಾಗಿ ಮುಂದುವರಿಸಲು ಸಭೆಯಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಸೆಪ್ಟೆಂಬರ್ 3ರಂದು ಗೋಕರ್ಣ–ಕಾರವಾರ ಚಲೋ ನಡೆಸಲು ತೀರ್ಮಾನಿಸಲಾಯಿತು. ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಸ್ತಾ ರೋಖೋ ಚಳುವಳಿ ನಡೆಸಲು ಹಾಗೂ ಯೋಜನೆ ವಿರುದ್ಧದ ಕಾನೂನು ಹೋರಾಟವನ್ನು ಮುಂದುವರಿಸಲು ಸಭೆ ನಿರ್ಧರಿಸಿದೆ.

ಅದೇ ರೀತಿ ಅಕ್ಟೋಬರ್ 2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.

ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ಸಂಬಂಧಿಸಿದ ಡಿಪಿಆರ್ ಸಿದ್ಧಪಡಿಸದಂತೆ ಜಿಲ್ಲೆಯ ಜನಪ್ರತಿನಿಧಿಗಳು ಗಟ್ಟಿ ನಿಲುವು ತಳೆಯಬೇಕು ಎಂಬ ಒಕ್ಕೊರಲ ಆಗ್ರಹವೂ ಸಭೆಯಲ್ಲಿ ವ್ಯಕ್ತವಾಯಿತು.

ಸಭೆಯಲ್ಲಿ ಶ್ರೀಮನ್ ನೆಲೆಮಾವು ಮಠದ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ನೂರು, ಹಿರಿಯ ಸಹಕಾರಿ ಎನ್.ವಿ. ಹೆಗಡೆ ಮುತ್ತಿಗೆ, ಜಿ.ಆರ್. ಹೆಗಡೆ ಬೆಳ್ಳೆಕೆರಿ, ಶಿವಾನಂದ ಕಳವೆ, ಎಂ.ಕೆ. ಭಟ್ ಯಡಹಳ್ಳಿ, ರಾಘವೇಂದ್ರ ಭಟ್ಟ ಹಾಸಣಗಿ, ನರಸಿಂಹ ಸಾತೊಡ್ಡಿ, ಜಿ.ಎನ್. ಹೆಗಡೆ ಕಣ್ಣಿಮನೆ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸುರೇಶ ಹಕ್ಕಿಮನೆ ಸ್ವಾಗತಿಸಿದರು. ಅನಂತ ಭಟ್ ಹುಳಗೋಳ ವಂದಿಸಿದರು.