ಕಾರವಾರದ ಯುವಕರಿಗೆ ಕೌಶಲ್ಯದ ಹೊಸ ಅವಕಾಶ; ಸ್ಥಳೀಯ ಐಟಿಐಗಳ ಜೊತೆ ನೌಕಾ ಡಾಕ್‌ಯಾರ್ಡ್ ಒಪ್ಪಂದ

ಕಾರವಾರ: ಸ್ಥಳೀಯ ಯುವಕರ ತಾಂತ್ರಿಕ ಕೌಶಲ್ಯವನ್ನು ಹೆಚ್ಚಿಸುವ ಹಾಗೂ ಅವರಿಗೆ ಉದ್ಯೋಗಮುಖಿ ಪ್ರಾಯೋಗಿಕ ತರಬೇತಿ ಒದಗಿಸುವ ಉದ್ದೇಶದಿಂದ ಕಾರವಾರ ನೌಕಾ ಡಾಕ್‌ಯಾರ್ಡ್ ಹಾಗೂ ಜಿಲ್ಲೆಯ ನಾಲ್ಕು ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ನಡುವೆ ಗುರುವಾರ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಲಾಯಿತು.
ಕಾರವಾರದ ನೌಕಾ ಡಾಕ್‌ಯಾರ್ಡ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಸೋಮನಾಥ ಐಟಿಐ, ಬಿಣಗಾ, ಸರ್ಕಾರಿ ಐಟಿಐ, ಬಾಡ್, ಮಲ್ಲಿಕಾರ್ಜುನ ಐಟಿಐ, ಸಿದ್ದರ ಹಾಗೂ ಸರ್ಕಾರಿ ಐಟಿಐ, ಅಂಕೋಲಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ನೌಕಾ ಡಾಕ್‌ಯಾರ್ಡ್‌ನ ಅಡ್ಮಿರಲ್ ಸೂಪರಿಂಟೆಂಡೆಂಟ್ ರಿಯರ್ ಅಡ್ಮಿರಲ್ ರವ್ನೀಶ್ ಸೇಠ್, ವಿ.ಎಸ್.ಎಂ. ಹಾಗೂ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೇಶ್ ಸಸಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕ ನೌಕಾ ಪ್ರದೇಶದ (ಕೆಎನ್‌ಎ) ನಾಗರಿಕ–ಸೇನಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಉಪಕ್ರಮ ಕೈಗೊಳ್ಳಲಾಗಿದೆ. ಒಪ್ಪಂದದಡಿ ಐಟಿಐ ವಿದ್ಯಾರ್ಥಿಗಳಿಗೆ ನೌಕಾ ಡಾಕ್‌ಯಾರ್ಡ್‌ನ ಅತ್ಯಾಧುನಿಕ ನಿರ್ವಹಣಾ ಹಾಗೂ ಸಹಾಯಕ ವ್ಯವಸ್ಥೆಗಳು, ಆಧುನಿಕ ತಂತ್ರಜ್ಞಾನಗಳು ಮತ್ತು ಕೈಗಾರಿಕಾ ಕಾರ್ಯವಿಧಾನಗಳ ಕುರಿತು ನೇರವಾಗಿ ತಿಳಿದುಕೊಳ್ಳುವ ಅವಕಾಶ ದೊರೆಯಲಿದೆ.
ಇದರೊಂದಿಗೆ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಪೂರಕವಾದ ಪ್ರಾಯೋಗಿಕ ತರಬೇತಿ ಹಾಗೂ ಕಾರ್ಯಸ್ಥಳದಲ್ಲಿಯೇ ಕಲಿಕೆಯ ಅವಕಾಶಗಳನ್ನು ಒದಗಿಸಲಾಗುತ್ತದೆ. ಇದರಿಂದ ತರಗತಿಯಲ್ಲಿ ಪಡೆಯುವ ಸೈದ್ಧಾಂತಿಕ ಜ್ಞಾನವನ್ನು ಕೈಗಾರಿಕಾ ಕ್ಷೇತ್ರದ ನೈಜ ಅನುಭವದೊಂದಿಗೆ ಜೋಡಿಸಲು ಸಾಧ್ಯವಾಗಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ರಿಯರ್ ಅಡ್ಮಿರಲ್ ರವ್ನೀಶ್ ಸೇಠ್, ಇಂದಿನ ಉದ್ಯೋಗ ಮಾರುಕಟ್ಟೆಗೆ ಅಗತ್ಯವಿರುವ ಕೌಶಲ್ಯಯುತ ಮಾನವ ಸಂಪನ್ಮೂಲ ಬೆಳೆಸುವುದು ಅತ್ಯಗತ್ಯವಾಗಿದೆ ಎಂದರು. ಎಂಒಯು ಮೂಲಕ ದೊರೆಯುವ ಉನ್ನತ ಮಟ್ಟದ ತರಬೇತಿ ಹಾಗೂ ಕಲಿಕಾ ಅವಕಾಶಗಳನ್ನು ಐಟಿಐಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ತರಗತಿಯಲ್ಲಿ ಕಲಿಯುವ ಜ್ಞಾನಕ್ಕೂ ಕೈಗಾರಿಕಾ ಕ್ಷೇತ್ರದಲ್ಲಿ ಅಗತ್ಯವಿರುವ ಪ್ರಾಯೋಗಿಕ ಅನುಭವಕ್ಕೂ ಇರುವ ಅಂತರವನ್ನು ಇಂತಹ ಸಹಯೋಗಗಳು ಕಡಿಮೆ ಮಾಡಲಿವೆ. ನೌಕಾ ಡಾಕ್‌ಯಾರ್ಡ್‌ನಂತಹ ಅತ್ಯಾಧುನಿಕ ಕಾರ್ಯಸ್ಥಳದಲ್ಲಿ ಸ್ಥಳೀಯ ಯುವಕರಿಗೆ ಕಲಿಕೆಯ ಅವಕಾಶ ದೊರೆಯುವುದು ಅವರ ಕೌಶಲ್ಯಾಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಈ ಸಹಯೋಗದಿಂದ ಯುವಕರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳಿಗೆ ಉತ್ತೇಜನ ದೊರೆಯುವುದರ ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ತಾಂತ್ರಿಕ ಮಾನವ ಸಂಪನ್ಮೂಲದ ಗುಣಮಟ್ಟ ಸುಧಾರಿಸಲು ಸಹಕಾರಿಯಾಗಲಿದೆ. ‘ಸ್ಕಿಲ್ ಇಂಡಿಯಾ’ ಅಭಿಯಾನ ಹಾಗೂ ನಾಗರಿಕ–ಸೇನಾ ಸಹಕಾರದ ಆಶಯಗಳಿಗೆ ಈ ಒಪ್ಪಂದ ಮತ್ತಷ್ಟು ಬಲ ನೀಡಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.
