UK Express Logo

ಮಾನವೀಯತೆ ಮೆರೆದ ಗ್ರಾಮ ಒಕ್ಕಲು ಯುವ ಬಳಗ; ಮೂವರಿಗೆ ಆರ್ಥಿಕ ಸಹಾಯ

By UKExpress on 9/9/2026

ಕುಮಟಾ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವ ಮೂವರಿಗೆ ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದ ವತಿಯಿಂದ ಒಟ್ಟು ₹35 ಸಾವಿರ ಆರ್ಥಿಕ ನೆರವು ನೀಡಲಾಯಿತು.

ಕುಮಟಾ ತಾಲೂಕಿನ ಸುವರ್ಣಗದ್ದೆಯ ಶ್ರೀ ಮಂಜುನಾಥ ಪಟಗಾರ ಅವರ ಮನೆಗೆ ತೆರಳಿದ ಯುವ ಬಳಗದ ಸದಸ್ಯರು ₹15 ಸಾವಿರ ಆರ್ಥಿಕ ಸಹಾಯ ನೀಡಿದರು. ಬಳಿಕ ಬಾಡ ಗ್ರಾಮದ ಶ್ರೀ ಸದಾನಂದ ಪಟಗಾರ ಅವರ ಮನೆಗೆ ತೆರಳಿ ₹10 ಸಾವಿರ ನೆರವು ನೀಡಿದರು. ಕಾಗಲ ಗ್ರಾಮದ ಪ್ರಶಾಂತ ಕೆ.ಪಿ. ಅವರಿಗೂ ಅವರ ಮನೆಗೆ ತೆರಳಿ ₹10 ಸಾವಿರ ಆರ್ಥಿಕ ನೆರವು ಹಸ್ತಾಂತರಿಸಿದರು.

ಆರೋಗ್ಯ ಸಮಸ್ಯೆಯಿಂದಾಗಿ ಚಿಕಿತ್ಸೆಯ ವೆಚ್ಚ ಭರಿಸಲು ತೊಂದರೆ ಅನುಭವಿಸುತ್ತಿರುವ ಕುಟುಂಬಗಳಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಯುವ ಬಳಗದ ಸದಸ್ಯರು ಈ ನೆರವನ್ನು ನೀಡಿದ್ದಾರೆ. ಸಂಕಷ್ಟದಲ್ಲಿರುವವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಮೂಲಕ ಗ್ರಾಮ ಒಕ್ಕಲು ಯುವ ಬಳಗವು ಮಾನವೀಯ ಸೇವೆಗೆ ಮುಂದಾಗಿದೆ.

ಕಳೆದ 12 ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಗ್ರಾಮ ಒಕ್ಕಲು ಯುವ ಬಳಗದ ಈ ಸೇವಾ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದ ಸದಸ್ಯರು ಹಾಗೂ ಸ್ಥಳೀಯ ಯುವ ಬಳಗದ ಸದಸ್ಯರು ಉಪಸ್ಥಿತರಿದ್ದರು.