
ಕಾರವಾರ: ಓವರ್‌ಲೋಡ್ ಲಾರಿಗಳ ಸಂಚಾರದಿಂದ ಹದಗೆಟ್ಟಿರುವ ಕಾರವಾರ–ಕೈಗಾ ರಸ್ತೆಯನ್ನು ಮುಂದಿನ 48 ಗಂಟೆಗಳಲ್ಲಿ ಸಂಚಾರಯೋಗ್ಯಗೊಳಿಸಲಾಗುವುದು ಎಂದು ಶಾಸಕ ಸತೀಶ್ ಸೈಲ್ ಭರವಸೆ ನೀಡಿದ್ದಾರೆ.
ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ಸತೀಶ್ ಸೈಲ್ ಸೋಮವಾರ ತಡರಾತ್ರಿ 1.30ರ ಸುಮಾರಿಗೆ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಪರಿಸ್ಥಿತಿಯನ್ನು ಪರಿಶೀಲಿಸಿದರು. ಬಳಿಕ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಡಿವೈಎಸ್ಪಿ, ಆರ್‌ಟಿಒ, ಪಿಡಬ್ಲ್ಯುಡಿ ಹಾಗೂ ಕೈಗಾ ಮತ್ತು ಮೇಘಾ ಎಂಜಿನಿಯರಿಂಗ್ ಕಂಪನಿ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಲಾಯಿತು.
ಪರಿಶೀಲನೆ ವೇಳೆ 30 ಟನ್ ಸಾಮರ್ಥ್ಯದ ರಸ್ತೆಯಲ್ಲಿ 80 ಟನ್‌ವರೆಗೆ ಭಾರಿ ವಾಹನಗಳು ಸಂಚರಿಸುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ರಸ್ತೆ ತೀವ್ರವಾಗಿ ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ಓವರ್‌ಲೋಡ್ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಇದರ ಜೊತೆಗೆ ರಸ್ತೆಯ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದು, ಮುಂದಿನ 48 ಗಂಟೆಗಳಲ್ಲಿ ರಸ್ತೆ ಸಂಚಾರಯೋಗ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸೈಲ್ ತಿಳಿಸಿದ್ದಾರೆ.
ಕೈಗಾ ಯೋಜನೆಗೆ ಸಂಬಂಧಿಸಿದ ಮೇಘಾ ಎಂಜಿನಿಯರಿಂಗ್ ಸೇರಿದಂತೆ ವಿವಿಧ ಸಂಸ್ಥೆಗಳು ತಮ್ಮ ಸಿಎಸ್‌ಆರ್ ನಿಧಿಯಡಿ ಕನಿಷ್ಠ 10 ಕಿ.ಮೀ. ರಸ್ತೆ ದುರಸ್ತಿಗೆ ಸಹಕರಿಸುವಂತೆ ಸೂಚಿಸಲಾಗಿದೆ.
ಭಾರಿ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸುವುದು ಹಾಗೂ ರಸ್ತೆ ನಕ್ಷೆ ಸಿದ್ಧಪಡಿಸುವ ಕುರಿತು ಶೀಘ್ರದಲ್ಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ಸೈಲ್ ತಿಳಿಸಿದ್ದಾರೆ.
ರಸ್ತೆಯ ದುಸ್ಥಿತಿಯಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು, ಶಾಲಾ ವಾಹನಗಳು, ಅಡುಗೆ ಅನಿಲ ಪೂರೈಕೆ ವಾಹನಗಳು ಸೇರಿದಂತೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದವು.
ಸಮಸ್ಯೆ ಕುರಿತು ವರದಿ ಪ್ರಕಟವಾದ ಬೆನ್ನಲ್ಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದ್ದು, ರಸ್ತೆ ದುರಸ್ತಿ ಮತ್ತು ಓವರ್‌ಲೋಡ್ ವಾಹನಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿರುವುದು ಗಮನಾರ್ಹವಾಗಿದೆ.
