UK Express Logo

ಸೊಸೈಟಿ ಕಳ್ಳತನ ಪ್ರಕರಣ: ಆರೋಪಿತನಿಗೆ 2 ವರ್ಷ ಜೈಲು, ₹7 ಸಾವಿರ ದಂಡ

By UKExpress on 9/9/2026

ಕುಮಟಾ: ಕುಮಟಾ ಹೊಸ ಬಸ್ ನಿಲ್ದಾಣದ ಸಮೀಪದ ಶ್ರೀ ಯಶೋಧರ ನಾಯ್ಕ ಕೋ-ಆಪರೇಟಿವ್ ಸೊಸೈಟಿಯ ಬೀಗ ಮುರಿದು ₹1,58,994 ಹಣ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಆರೋಪಿತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ದಾಂಡೇಲಿಯ ಸುಭಾಸನಗರ ನಿವಾಸಿ ಮುಜಫರ್ ಮಹಮ್ಮದ್ ಸಾಬ್ ಎಂಬಾತನು 2020ರ ಡಿಸೆಂಬರ್ 17ರಂದು ಮುಂಜಾನೆ ಸುಮಾರು 3.15ಕ್ಕೆ ಸೊಸೈಟಿಯೊಳಗೆ ಅಕ್ರಮವಾಗಿ ಪ್ರವೇಶಿಸಿ, ಸಿಸಿ ಕ್ಯಾಮೆರಾ ಬಂದ್ ಮಾಡಿ ಅಲ್ಮಿರಾ ಹಾಗೂ ಲಾಕರ್ ಮುರಿದು ಹಣ ಕದ್ದಿದ್ದ. ಬಳಿಕ ಸಿಸಿ ಕ್ಯಾಮೆರಾದ ಡಿವಿಆರ್‌ನ್ನು ತೆಗೆದುಕೊಂಡು ಹೋಗಿ ಅಘನಾಶಿನಿ ಹೊಳೆಯಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಿದ್ದ ಎಂದು ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಕುಮಟಾದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಶ್ರೀಮತಿ ವರ್ಷಶ್ರೀ ಅವರು ಆರೋಪಿತನನ್ನು ಭಾರತೀಯ ದಂಡ ಸಂಹಿತೆಯ ಕಲಂ 457, 380 ಮತ್ತು 201ರಡಿ ದೋಷಿ ಎಂದು ತೀರ್ಮಾನಿಸಿದ್ದಾರೆ.

ಕಲಂ 457ರಡಿ 2 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ ₹3,000 ದಂಡ, ಕಲಂ 380ರಡಿ 2 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ ₹3,000 ದಂಡ, ಮತ್ತು ಕಲಂ 201ರಡಿ 8 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ ₹1,000 ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಕ್ರಮವಾಗಿ ಹೆಚ್ಚುವರಿ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದಲ್ಲಿ ಕುಮಟಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವಿ ಗುಡ್ಡಿ ಭಾಗಶಃ ತನಿಖೆ ನಡೆಸಿದ್ದು, ಬಳಿಕ ಪೊಲೀಸ್ ವೃತ್ತ ನಿರೀಕ್ಷಕ ಪರಮೇಶ್ವರ ಗುನಗಾ ತನಿಖೆ ಮುಂದುವರಿಸಿದ್ದರು. ಶಿವಪ್ರಕಾಶ್ ಆರ್. ನಾಯ್ಕ್ ಅವರು ತನಿಖೆ ಪೂರ್ಣಗೊಳಿಸಿ ಆರೋಪಿತನ ವಿರುದ್ಧ ಅಂತಿಮ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಗಿರೀಶ ನಾಗಪ್ಪ ಪಟಗಾರ ಅವರು ವಾದ ಮಂಡಿಸಿದ್ದರು.