ಹೊನ್ನಾವರ: ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಗುಂದದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ 27 ವರ್ಷದ ವಿವಾಹಿತೆಯ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇದು ಅಸಹಜ ಸಾವಲ್ಲ, ಕೊಲೆ ಪ್ರಕರಣ ಎಂದು ತನಿಖೆಯಲ್ಲಿ ಕಂಡುಬಂದಿದೆ. ಪತ್ನಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಆಕೆಯ ಪತಿಯನ್ನು ಮಂಕಿ ಪೊಲೀಸರು ಬಂಧಿಸಿದ್ದಾರೆ.
ಮೃತಳನ್ನು ಜೋಯಿಡಾ ತಾಲೂಕಿನ ನಂದಿಗದ್ದೆಯ ಹರಿಶ್ಚಂದ್ರ ದೇಸಾಯಿ ಅವರ ಪುತ್ರಿ ಹಾಗೂ ದೊಡ್ಡಗುಂದ ನಿವಾಸಿ ಮಂಗಲಾ ನಾಯ್ಕ (27) ಎಂದು ಗುರುತಿಸಲಾಗಿದೆ.
ಆಗಸ್ಟ್ 25ರಂದು ಮಂಗಲಾ ಮೃತಪಟ್ಟಿದ್ದರು. ಮುಂಜಾನೆ ರಕ್ತದ ವಾಂತಿ ಮಾಡಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ಪತಿ ಗಣಪತಿ ನಾಯ್ಕ ತಿಳಿಸಿದ್ದ ಎನ್ನಲಾಗಿದೆ. ಈ ಸಂಬಂಧ ಆರಂಭದಲ್ಲಿ ಮಂಕಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು.
ಆದರೆ ಮಂಗಲಾ ಸಾವಿನ ಬಗ್ಗೆ ತವರು ಮನೆಯವರು ಅನುಮಾನ ವ್ಯಕ್ತಪಡಿಸಿದ್ದರು. ಇದರ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದಾಗ ಇದು ಅಸಹಜ ಸಾವಲ್ಲ, ಕೊಲೆ ಎಂಬುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಲಾ ಮನೆಯಲ್ಲಿದ್ದ ವೇಳೆ ಆಕೆಯ ಕೆನ್ನೆಯ ಮೇಲೆ ಹಲ್ಲೆ ಮಾಡಿ ಗಣಪತಿ ಮಂಜುನಾಥ ನಾಯ್ಕ ಹತ್ಯೆ ಮಾಡಿದ್ದಾನೆ ಎಂದು ಮೃತಳ ಸಹೋದರಿ ಲಲಿತಾ ಸಚಿನ್ ಗುಂಜಿಕರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಮಂಗಲಾ ಹಾಗೂ ಗಣಪತಿಗೆ ಸುಮಾರು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿತ್ತು. ಗಣಪತಿ ಸಾಲ ಮಾಡಿಕೊಂಡು ಮದ್ಯಪಾನ ಹಾಗೂ ದುಂದು ವೆಚ್ಚ ಮಾಡುತ್ತಿದ್ದುದನ್ನು ಮಂಗಲಾ ಪ್ರಶ್ನಿಸುತ್ತಿದ್ದಳು ಎನ್ನಲಾಗಿದೆ. ಇದೇ ವಿಚಾರವಾಗಿ ಪತಿ-ಪತ್ನಿ ನಡುವೆ ಪದೇಪದೇ ಜಗಳ ನಡೆಯುತ್ತಿದ್ದು, ಗಣಪತಿ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಹಾಗೂ ಕೊಲ್ಲಲು ಯತ್ನಿಸುತ್ತಿದ್ದ ಎಂಬ ಆರೋಪವೂ ದೂರಿನಲ್ಲಿ ಮಾಡಲಾಗಿದೆ.
ತನಿಖೆಯಲ್ಲಿ ಕೊಲೆ ಪ್ರಕರಣ ಎಂಬುದು ಕಂಡುಬಂದ ಹಿನ್ನೆಲೆಯಲ್ಲಿ ಆಗಸ್ಟ್ 26ರಂದು ನೀಡಲಾದ ದೂರಿನ ಆಧಾರದ ಮೇಲೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ಕೈಗೊಂಡ ಮುರ್ಡೇಶ್ವರ ವೃತ್ತ ನಿರೀಕ್ಷಕ ಜಗದೀಶ ಹಂಚಿನಾಳ ಅವರು ಆರೋಪಿಯ ಪತ್ತೆಗಾಗಿ ಮಂಕಿ ಪೊಲೀಸ್ ಠಾಣೆಯ ಪಿಎಸ್ಐ ಕುಮಾರ ಕಾಂಬಳೆ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಿದ್ದರು. ಕಾರ್ಯಾಚರಣೆ ನಡೆಸಿದ ತಂಡ ಮೃತಳ ಪತಿ, ದೊಡ್ಡಗುಂದ ನಿವಾಸಿ ಹಾಗೂ ಆಟೋ ಚಾಲಕ ಗಣಪತಿ ನಾಯ್ಕ (38)ನನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ ಬಿ. ಅವರ ಮಾರ್ಗದರ್ಶನದಲ್ಲಿ, ಮುರ್ಡೇಶ್ವರ ವೃತ್ತ ನಿರೀಕ್ಷಕ ಜಗದೀಶ ಹಂಚಿನಾಳ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ವಿಶೇಷ ತಂಡದಲ್ಲಿ ಪಿಎಸ್ಐ ಕುಮಾರ ಕಾಂಬಳೆ, ಎಎಸ್ಐಗಳಾದ ಪರಮೇಶ್ವರ ಮಾಳೇಕರ ಮತ್ತು ಕಿರಣ ವೈದ್ಯ, ಸಿಬ್ಬಂದಿಗಳಾದ ಕಿರಣ ನಾಯ್ಕ, ಸುಬ್ರಮಣ್ಯ ನಾಯ್ಕ, ರುದ್ರಯ್ಯ ಕಾಡದೇವರ, ರಾಜು ಗೌಡ, ವಿವೇಕ ನಾಯ್ಕ, ಅಣ್ಣಪ್ಪ ಕೋರಿ, ಬಸವನಗೌಡ, ವಿದ್ಯಾ ನಾಯ್ಕ ಹಾಗೂ ಚಾಲಕರಾದ ಯಶ್ವಂತ ನಾಯ್ಕ ಮತ್ತು ಗಣಪತಿ ನಾಯ್ಕ ಸೇರಿದಂತೆ ಮಂಕಿ ಪೊಲೀಸ್ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.
