UK Express Logo

ಅಪ್ರಾಪ್ತರಿಗೆ ವಾಹನ ನೀಡಿದ ಮಾಲಕರಿಗೆ ₹25 ಸಾವಿರ ದಂಡ

By UKExpress on 9/9/2026

ಶಿರಸಿ: ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ನೀಡಿದ ಇಬ್ಬರು ವಾಹನ ಮಾಲಕರಿಗೆ ಶಿರಸಿ ಜೆಎಂಎಫ್‌ಸಿ ನ್ಯಾಯಾಲಯ ತಲಾ ₹25 ಸಾವಿರ ದಂಡ ವಿಧಿಸಿದೆ.

ನಗರದ ಹುಬ್ಬಳ್ಳಿ ರಸ್ತೆ ಬಳಿ ಶಿರಸಿ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ದೇವೇಂದ್ರ ನಾಯ್ಕ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸ್ಕೂಟರ್‌ಗಳನ್ನು ತಡೆದು ಪರಿಶೀಲಿಸಿದ್ದರು. ಈ ವೇಳೆ ಸ್ಕೂಟರ್ ಚಲಾಯಿಸುತ್ತಿದ್ದವರು ಅಪ್ರಾಪ್ತ ವಯಸ್ಸಿನ ಬಾಲಕರು ಎಂಬುದು ಪತ್ತೆಯಾಗಿತ್ತು.

ಈ ಸಂಬಂಧ ವಾಹನ ಮಾಲಕರ ವಿರುದ್ಧ ಶಿರಸಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿತ್ತು. ತನಿಖೆ ಪೂರ್ಣಗೊಂಡ ಬಳಿಕ ಪೊಲೀಸರು ದೋಷಾರೋಪಣಾ ಪತ್ರವನ್ನು ಶಿರಸಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ವಾಹನ ಮಾಲಕರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಇಬ್ಬರಿಗೂ ತಲಾ ₹25 ಸಾವಿರದಂತೆ ದಂಡ ವಿಧಿಸಿ ಆದೇಶಿಸಿದೆ.

ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡುವುದರಿಂದ ಅಪಘಾತ ಹಾಗೂ ಜೀವಹಾನಿಯ ಅಪಾಯ ಹೆಚ್ಚಾಗುವ ಹಿನ್ನೆಲೆಯಲ್ಲಿ, ಮಕ್ಕಳಿಗೆ ವಾಹನ ನೀಡುವ ಮುನ್ನ ಪೋಷಕರು ಹಾಗೂ ವಾಹನ ಮಾಲಕರು ಎಚ್ಚರಿಕೆ ವಹಿಸಬೇಕು ಎಂಬ ಸಂದೇಶವನ್ನು ಈ ತೀರ್ಪು ನೀಡಿದೆ.