UK Express Logo

ಅಂತರ ಜಿಲ್ಲಾ ದನ ಕಳ್ಳರ ಗ್ಯಾಂಗ್ ಬಂಧನ: ಮೂವರು ಆರೋಪಿಗಳ ಬಂಧನ

By UKExpress on 9/9/2026

ಶಿರಸಿ: ತಾಲೂಕಿನ ಹುಲೇಕಲ್‌ನಲ್ಲಿ ಆ.12ರಂದು ರಾತ್ರಿ ಆಕಳು ಹಾಗೂ ಹೋರಿ ಕರುಗಳನ್ನು ಕಳ್ಳತನ ಮಾಡಿದ್ದ ಪ್ರಕರಣವನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಭೇದಿಸಿ, ಅಂತರ ಜಿಲ್ಲಾ ದನ ಕಳ್ಳರ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಶಿವಮೊಗ್ಗದ ಮೊಹಮ್ಮದ್ ಅಯಾಜ್ ಅಲಿಯಾಸ್ ಅಂಡು (23), ಮೊಹಮ್ಮದ್ ಇಸ್ಮಾಯಿಲ್ (36) ಹಾಗೂ ಅಬ್ದುಲ್ ಅಜೀಜ್ (35) ಎಂದು ಗುರುತಿಸಲಾಗಿದೆ.

ಹುಲೇಕಲ್‌ನಲ್ಲಿ ಅಪರಿಚಿತರು ಕಾರಿನಲ್ಲಿ ಬಂದು ಜಾನುವಾರುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಆರೋಪಿಗಳ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಿ ತನಿಖೆ ಕೈಗೊಂಡಿದ್ದರು.

ಆ.29ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಸುಮಾರು ₹3 ಲಕ್ಷ ಮೌಲ್ಯದ ಮಹೀಂದ್ರಾ ಎಕ್ಸ್‌ಯುವಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ, ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆದಿದೆ.

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ರಮೇಶ್ ಶಂ. ಹೂಗಾರ ಅವರ ನೇತೃತ್ವದಲ್ಲಿ ಪಿಎಸ್‌ಐ ಸಂತೋಷಕುಮಾರ್ (ಕಾ.ಸು.), ಪಿಎಸ್‌ಐ ಅಶೋಕ ಆರ್. ರಾಠೋಡ (ತನಿಖೆ), ಎಎಸ್‌ಐ ಪ್ರದೀಪ ಟಿ. ರೇವಣಕರ ಹಾಗೂ ಸಿಬ್ಬಂದಿಗಳಾದ ಮಹಾಂತೇಶ್ ಬಾರಕೇರ್, ಬಸವರಾಜ್ ಹಗರಿ, ಕೋಟೇಶ ನಾಗರವಳ್ಳಿ, ಸಂದೀಪ್ ನಿಂಬಾಯಿ, ಅರುಣಕುಮಾರ್ ವಿ., ವೆಂಕಟ್ರಮಣ ನಾಯ್ಕ, ದಾವಲ್ ಸಾಬ್ ಕುಂದಿ, ಮಾರುತಿ ಗೌಡ, ಗಣಪತಿ ನಾಯ್ಕ, ಭರತ್ ಎನ್.ಜೆ. ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರಕರಣವನ್ನು ಪತ್ತೆಹಚ್ಚಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಐಪಿಎಸ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.