ತಾರೇಸರ, ಕುಚಗುಂಡಿಯಲ್ಲಿ ಉಚಿತ ಹೊಲಿಗೆ ತರಬೇತಿ: ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್‌ನಿಂದ ಶಿಬಿರ

ಸಿದ್ದಾಪುರ: ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸದೃಢರಾಗಬೇಕು ಎಂಬ ಉದ್ದೇಶದಿಂದ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ಕುಚಗುಂಡಿಯ ಕಲ್ಯಾಣೇಶ್ವರ ದೇವಸ್ಥಾನದ ಸಭಾಂಗಣ ಹಾಗೂ ತಾರೇಸರದ ಸಭಾಭವನದಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರ ಆರಂಭಿಸಲಾಗಿದೆ.
ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಶಿಬಿರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಹಿಳೆಯರಿಗೆ ಅನುಕೂಲವಾಗುವ ಉದ್ದೇಶದಿಂದ ಇಂತಹ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹೊಲಿಗೆ ತರಬೇತಿ ಪಡೆದು ಮನೆಯಲ್ಲಿಯೇ ಉದ್ಯೋಗ ಆರಂಭಿಸುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು ಎಂದರು.
“ಬಡತನವನ್ನು ನಿವಾರಿಸಲು ಸ್ವ ಉದ್ಯೋಗ ಪ್ರಮುಖ ಮಾರ್ಗವಾಗಿದೆ. ಮಹಿಳೆಯರು ಹೊಲಿಗೆ ಕಲಿತು ಆರ್ಥಿಕವಾಗಿ ಸದೃಢರಾಗಬೇಕು. ತರಬೇತಿಗೆ ನುರಿತ ತರಬೇತುದಾರರನ್ನು ನಿಯೋಜಿಸಲಾಗಿದ್ದು, ಉತ್ತಮ ಗುಣಮಟ್ಟದ ಹೊಲಿಗೆ ಯಂತ್ರವನ್ನೂ ಒದಗಿಸಲಾಗಿದೆ. ಒಂದು ತಿಂಗಳ ತರಬೇತಿ ಅವಧಿಯನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಅವರು ಹೇಳಿದರು.
ಜೀವನದುದ್ದಕ್ಕೂ ಕಲಿಕೆ ನಿರಂತರವಾಗಿರುತ್ತದೆ. ಮೊದಲು ಕಲಿತು, ನಂತರ ಸಂಪಾದಿಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಇಂತಹ ತರಬೇತಿ ಶಿಬಿರಗಳು ಗ್ರಾಮೀಣ ಪ್ರದೇಶದಲ್ಲಿ ಆತ್ಮೀಯತೆ ಹಾಗೂ ಸಾಮಾಜಿಕ ಸಾಮರಸ್ಯ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಹಸ್ರಗೋಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರದೀಪ ಹೆಗಡೆ ಕರ್ಜಗಿ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ ನೀಡಬೇಕು ಎಂಬ ಅನಂತಮೂರ್ತಿ ಹೆಗಡೆಯವರ ಬಹುದೊಡ್ಡ ಕನಸು ಇದೀಗ ನನಸಾಗುತ್ತಿದೆ. ಮಹಿಳೆಯರು ಸ್ವ ಉದ್ಯೋಗದ ಮೂಲಕ ಕುಟುಂಬ ನಿರ್ವಹಿಸುವ ಶಕ್ತಿ ಹೊಂದಬೇಕು ಎಂಬುದೇ ಕಾರ್ಯಕ್ರಮದ ಉದ್ದೇಶ ಎಂದರು.
ನಾರಾಯಣ ಹೆಗಡೆ ತಾರೇಸರ ಮಾತನಾಡಿ, ಹೊಲಿಗೆ ಕಲಿಯುವುದು ಆರ್ಥಿಕ ಸದೃಢತೆಗೆ ಸುಲಭವಾದ ಮಾರ್ಗವಾಗಿದೆ. ತಮ್ಮೂರಿನಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರ ಆರಂಭಗೊಂಡಿರುವುದು ಸಂತಸದ ಸಂಗತಿ ಎಂದರು.
ಈ ಸಂದರ್ಭದಲ್ಲಿ ಸುಬ್ರಾಯ ಹೆಗಡೆ ಬೇಣದಮನೆ, ಆರ್.ಜಿ. ಭಟ್ ಯಲೂಗಾರ, ನಾರಾಯಣ ಹೆಗಡೆ ತಾರೇಸರ, ಗಣೇಶ ಹೆಗಡೆ ಶಮೆಮನೆ, ನವೀನ ಹೆಗಡೆ ತಾರೇಸರ ಹಾಗೂ ಹೊಲಿಗೆ ತರಬೇತುದಾರರಾದ ವೀಣಾ ಕೊಳಗಿಬೀಸ್, ಆಶಾ ಶಿರಸಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಮಲಾಕರ ನಾಯ್ಕ ಹೆರೂರ, ಸ್ಥಳೀಯ ಪ್ರಮುಖರು, ಮಾತನಾಡಿ, ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದೆ. ಜಾತಿ-ಭೇದವಿಲ್ಲದೆ ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸುತ್ತಿರುವ ಅನಂತಮೂರ್ತಿ ಹೆಗಡೆಯವರ ಸೇವಾ ಮನೋಭಾವ ಶ್ಲಾಘನೀಯ. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು ಎಂಬ ಉದ್ದೇಶದಿಂದ ಆಯೋಜಿಸಿರುವ ಈ ಶಿಬಿರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
