
ಯಲ್ಲಾಪುರ: ಅನ್ನಭಾಗ್ಯ ಯೋಜನೆಯಡಿ ಸರ್ಕಾರ ವಿತರಿಸುವ ಪಡಿತರ ಅಕ್ಕಿಯನ್ನು ಸಾರ್ವಜನಿಕರಿಂದ ಕಡಿಮೆ ಬೆಲೆಗೆ ಪಡೆದು, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.12ರಂದು ರಾತ್ರಿ ಯಲ್ಲಾಪುರ ತಾಲೂಕಿನ ನೂತನನಗರ ಜಡ್ಡಿಯ ಮಸೀದಿ ಸಮೀಪ ಪೊಲೀಸರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಟಾಟಾ ಇಂಟ್ರಾ ವಾಹನದಲ್ಲಿ ಸಾಗಿಸಲಾಗುತ್ತಿದ್ದ 30 ಚೀಲ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಅಕ್ಕಿ ಒಟ್ಟು 1,500 ಕೆ.ಜಿ. (15 ಕ್ವಿಂಟಾಲ್) ತೂಕ ಹೊಂದಿದ್ದು, ಇದರ ಅಂದಾಜು ಮೌಲ್ಯ ₹51,000 ಎಂದು ತಿಳಿಸಲಾಗಿದೆ. ಅಕ್ಕಿ ಸಾಗಾಟಕ್ಕೆ ಬಳಸಿದ್ದ ಟಾಟಾ ಇಂಟ್ರಾ ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಅದರ ಮೌಲ್ಯ ಸುಮಾರು ₹2 ಲಕ್ಷ ಎಂದು ದಾಖಲಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಾಂಧೀನಗರದ ಶಾರೂಕ್ ನಜೀರ ಅಹಮ್ಮದ ನೇಸರಗಿ (31) ಹಾಗೂ ಶಾನು ರೇಹಮಾನ ಯಾದವಾಡ (30) ವಿರುದ್ಧ ಅವಶ್ಯಕ ವಸ್ತುಗಳ ಕಾಯ್ದೆ-1955ರ ಕಲಂ 3 ಮತ್ತು 7ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಹಾರ ನಿರೀಕ್ಷಕ ರಾಘವೇಂದ್ರ ರಾಮಾ ಗೌಡ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಮಹಾವೀರ ಕಾಂಬಳೆ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.
