
ಶಿರಸಿ: ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಶಿರಸಿ, ಸಿದ್ದಾಪುರ ಹಾಗೂ ಬನವಾಸಿ ಭಾಗದ ಭಕ್ತಾದಿಗಳೊಂದಿಗೆ ಬೈಂದೂರಿನ ಹೋಳಿಹೊಳೆಯಲ್ಲಿರುವ ಶ್ರೀ ಬಿಳಿಸೆಲೆ ವಿನಾಯಕ ದೇವಸ್ಥಾನದ ಪವಿತ್ರ ಪ್ರಾಂಗಣದಲ್ಲಿ ನಡೆಯುತ್ತಿರುವ ಪರಮಪೂಜ್ಯ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಶ್ರದ್ಧಾ-ಭಕ್ತಿಯಿಂದ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಅನಂತಮೂರ್ತಿ ಹೆಗಡೆ ಅವರು ಶ್ರೀಗಳ ಪಾದಪೂಜೆ ನೆರವೇರಿಸಿ ಮಹಾಸಂಕಲ್ಪ ಕೈಗೊಂಡರು. ಬಳಿಕ ಶ್ರೀಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ, ಗುರುಗಳ ಮಾರ್ಗದರ್ಶನ ಹಾಗೂ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು.
ಬನವಾಸಿ ಬಿಜೆಪಿ ಮಂಡಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಉಪಾಧ್ಯಕ್ಷರಾದ ರಾಘವೇಂದ್ರ ನಾಯ್ಕ ಬದನಗೋಡು, ಶಿನಾ ಪೂಜಾರಿ ಗೇರುಮನೆ, ವೇಣುಗೋಪಾಲ ಹೆಗಡೆ, ಪ್ರವೀಣ ಹೆಗಡೆ, ಸಿದ್ದಾಪುರದ ವಿನಾಯಕ ನಾಯ್ಕ, ಕೃಷ್ಣಮೂರ್ತಿ ನಾಯ್ಕ ಐಸೂರು, ಪ್ರಜೋತ, ನವೀನ ನಾಯ್ಕ ಸೇರಿದಂತೆ ಹಲವರು ಅನಂತಮೂರ್ತಿ ಹೆಗಡೆ ಅವರೊಂದಿಗೆ ಶ್ರೀಗಳ ಪಾದಪೂಜೆ ಹಾಗೂ ಮಹಾಸಂಕಲ್ಪದಲ್ಲಿ ಭಾಗವಹಿಸಿದರು. ಚಾತುರ್ಮಾಸ ಸಮಿತಿ ಅಧ್ಯಕ್ಷ ಗುರುರಾಜ್ ಗಂಟಿಹೊಳಿ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಅನಂತಮೂರ್ತಿ ಹೆಗಡೆ, “ಚಾತುರ್ಮಾಸ್ಯ ವ್ರತಾಚರಣೆಯಂತಹ ಪವಿತ್ರ ಧಾರ್ಮಿಕ ಕಾರ್ಯಕ್ರಮದಲ್ಲಿ ನಮ್ಮ ಕ್ಷೇತ್ರದ ಭಕ್ತಾದಿಗಳು ಹಾಗೂ ಆತ್ಮೀಯರೊಂದಿಗೆ ಪಾಲ್ಗೊಂಡು ಶ್ರೀಗಳ ಕೃಪೆಗೆ ಪಾತ್ರರಾಗಿರುವುದು ನನಗೆ ಧನ್ಯತೆಯ ಭಾವ ಮೂಡಿಸಿದೆ. ಶ್ರೀಗಳ ಆಶೀರ್ವಾದ ಎಲ್ಲರ ಮೇಲೂ ಸದಾ ಇರಲಿ” ಎಂದು ಹೇಳಿದರು.
