ತಂದೆ–ಮಗನ ಕೈಚಳಕದಲ್ಲಿ ಅರಳಿದ ಮಣ್ಣಿನ ಗಣಪತಿ; ಕಾರವಾರ, ಗೋವಾದಲ್ಲಿ ಮಾಂಜ್ರೇಕರ ಕುಟುಂಬದ ವಿಗ್ರಹಗಳಿಗೆ ಭಾರಿ ಬೇಡಿಕೆ

ಕಾರವಾರ: ಶ್ರೀ ಗಣೇಶ ಚತುರ್ಥಿಗೆ ಇನ್ನೇನು ಒಂದು ದಿನ ಬಾಕಿ ಉಳಿದಿದ್ದು, ಮನೆ ಮನೆಗಳಲ್ಲಿ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದೆ. ಇದರ ನಡುವೆ ಮಣ್ಣಿನ ಗಣಪತಿ ವಿಗ್ರಹಗಳನ್ನು ತಯಾರಿಸುವ ಕಲಾವಿದರು ಅಂತಿಮ ಹಂತದ ಕೆಲಸದಲ್ಲಿ ನಿರತರಾಗಿದ್ದಾರೆ.
ಕಾರವಾರ ತಾಲ್ಲೂಕಿನ ಕಡವಾಡ ಗ್ರಾಮದ ಗಣಪತಿ ಬಾಬನಿ ಮಾಂಜ್ರೇಕರ ಅವರು ಹಲವು ವರ್ಷಗಳಿಂದ ಮಣ್ಣಿನ ಗಣಪತಿ ವಿಗ್ರಹಗಳನ್ನು ತಯಾರಿಸುವ ಕಾಯಕವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ತಮ್ಮ ಮಗ ರಜತ ಮಾಂಜ್ರೇಕರ ಅವರಿಗೆ ಬಾಲ್ಯದಲ್ಲಿಯೇ, ಸುಮಾರು 9ನೇ ವಯಸ್ಸಿನಿಂದ ಈ ಕಲೆಯನ್ನು ಕಲಿಸಿಕೊಟ್ಟಿದ್ದಾರೆ.
ತಂದೆಯಿಂದ ಕಲಿತ ಕಲೆಯನ್ನು ಮುಂದುವರಿಸಿರುವ ರಜತ ಅವರು ಇದೀಗ ತಂದೆಯೊಂದಿಗೆ ಕೈಜೋಡಿಸಿ ವಿವಿಧ ವಿನ್ಯಾಸಗಳಲ್ಲಿ ಸುಂದರವಾದ ಮಣ್ಣಿನ ಗಣಪತಿ ವಿಗ್ರಹಗಳನ್ನು ರೂಪಿಸುತ್ತಿದ್ದಾರೆ. ಮಾಂಜ್ರೇಕರ ಕುಟುಂಬದ ವಿಗ್ರಹಗಳಿಗೆ ಕಾರವಾರ ತಾಲ್ಲೂಕಿನಲ್ಲಿ ಮಾತ್ರವಲ್ಲದೆ ಗೋವಾ ರಾಜ್ಯದಲ್ಲಿಯೂ ಉತ್ತಮ ಬೇಡಿಕೆ ಇದೆ. ಈ ಬಾರಿ ತಯಾರಿಸಿದ ವಿಗ್ರಹಗಳ ಪೈಕಿ ಐದು ವಿಗ್ರಹಗಳನ್ನು ಶುಕ್ರವಾರ ಗೋವಾಕ್ಕೆ ಕೊಂಡೊಯ್ಯಲಾಗಿದೆ.
ಪ್ರತಿ ವರ್ಷ ಗಣಪತಿ ವಿಗ್ರಹಗಳ ತಯಾರಿಕೆಯಲ್ಲಿ ಹೊಸತನ ಮೂಡಿಸುತ್ತಿರುವ ಈ ಕುಟುಂಬ, ಈ ಬಾರಿ ಸುಮಾರು 30 ಮಣ್ಣಿನ ಗಣಪತಿ ವಿಗ್ರಹಗಳನ್ನು ತಯಾರಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಣ್ಣಿನ ಗಣಪತಿ ವಿಗ್ರಹ ತಯಾರಿಸುವ ಸಾಂಪ್ರದಾಯಿಕ ಕಲಾವಿದರ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ದುಬಾರಿ ಜೀವನದ ನಡುವೆ ಒಂದು ಮಣ್ಣಿನ ಗಣಪತಿ ವಿಗ್ರಹವನ್ನು ತಯಾರಿಸಿ ಗ್ರಾಹಕರ ಮನೆಗೆ ತಲುಪಿಸುವವರೆಗೆ ಮಣ್ಣು, ಬಣ್ಣ, ಅಲಂಕಾರ ಸಾಮಗ್ರಿ ಸೇರಿದಂತೆ ಸಾಕಷ್ಟು ವೆಚ್ಚವಾಗುತ್ತದೆ. ಇದರ ಜೊತೆಗೆ ವಿಗ್ರಹ ತಯಾರಿಕೆಗೆ ಹೆಚ್ಚಿನ ಸಮಯ ಮತ್ತು ಶ್ರಮವೂ ಅಗತ್ಯವಿದೆ.
ಮಣ್ಣಿನ ಗಣಪತಿ ವಿಗ್ರಹ ತಯಾರಿಸುವ ಸಾಂಪ್ರದಾಯಿಕ ಕಲೆಯನ್ನು ಉಳಿಸಿ ಬೆಳೆಸಲು ಸರ್ಕಾರ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಆರ್ಥಿಕ ನೆರವು ಹಾಗೂ ಅಗತ್ಯ ಸೌಲಭ್ಯಗಳ ಜೊತೆಗೆ ಮಾಸಾಶನ ನೀಡುವ ಮೂಲಕ ಕಲಾವಿದರ ಕಲಾ ಸೇವೆಯನ್ನು ಗೌರವಿಸಬೇಕು ಎಂಬುದು ಮಾಂಜ್ರೇಕರ ಕುಟುಂಬದ ಆಶಯವಾಗಿದೆ.
ಪರಿಸರ ಸ್ನೇಹಿ ಮಣ್ಣಿನ ಗಣಪತಿ ವಿಗ್ರಹಗಳ ಬಳಕೆಗೆ ಉತ್ತೇಜನ ನೀಡುವುದರ ಜೊತೆಗೆ, ಇಂತಹ ಸಾಂಪ್ರದಾಯಿಕ ಕಲಾವಿದರ ಬದುಕಿಗೂ ಸರ್ಕಾರ ಮತ್ತು ಸಮಾಜ ಬೆಂಬಲ ನೀಡಬೇಕಾಗಿದೆ.
