
ಸಿದ್ದಾಪುರ: ಕಸ್ತೂರಿ ರಂಗನ್ ವರದಿ ಜಾರಿಯಿಂದ ಮಲೆನಾಡಿನ ಜನರ ಬದುಕಿಗೆ ಸಂಕಷ್ಟ ಎದುರಾಗಲಿದೆ ಎಂದು ಆರೋಪಿಸಿ ಸಿದ್ದಾಪುರದಲ್ಲಿ ಪಕ್ಷಾತೀತವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಕಸ್ತೂರಿ ರಂಗನ್ ವಿರೋಧಿ ಜನಧ್ವನಿ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಮೆರವಣಿಗೆಗೆ ತಾಲೂಕಿನ ಬೇಡ್ಕಣಿಯ ಕೋಟೆ ಆಂಜನೇಯ ದೇವಾಲಯದಲ್ಲಿ ಚಾಲನೆ ನೀಡಲಾಯಿತು. ತ್ಯಾರ್ಸಿ ಹಾಗೂ ಹೊಸೂರು ಮಾರ್ಗವಾಗಿ ಸಾಗಿದ ಮೆರವಣಿಗೆ ತಾಲೂಕು ಆಡಳಿತ ಸೌಧ ತಲುಪಿತು. ಬಳಿಕ ತಾಲೂಕು ದಂಡಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ನಾಯ್ಕ ಮಾತನಾಡಿ, ಕಸ್ತೂರಿ ರಂಗನ್ ವರದಿ ಮಲೆನಾಡಿನ ಜನರ ಪಾಲಿಗೆ ಮರಣ ಶಾಸನದಂತಾಗಿದೆ. ಜನರ ಅಭಿಪ್ರಾಯ ಪಡೆಯದೆ ಹಾಗೂ ಗ್ರಾಮಸಭೆ ನಡೆಸದೆ ವೈಮಾನಿಕ ಸಮೀಕ್ಷೆ ಆಧರಿಸಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವುದು ರೈತರ ಬದುಕಿಗೆ ತೊಂದರೆ ಉಂಟುಮಾಡಲಿದೆ ಎಂದು ಹೇಳಿದರು.
ಜನರು ಸ್ವಯಂಪ್ರೇರಿತರಾಗಿ ಹೋರಾಟದಲ್ಲಿ ಪಾಲ್ಗೊಂಡು ಗಟ್ಟಿ ಧ್ವನಿ ಎತ್ತಬೇಕು. ಮಲೆನಾಡಿನ ಜನರ ಪರವಾಗಿ ವಿಧಾನಸೌಧದಲ್ಲಿ ಧ್ವನಿ ಎತ್ತುವುದಾಗಿ ಅವರು ಭರವಸೆ ನೀಡಿದರು.
ಹೋರಾಟದ ರೂವಾರಿ ವಸಂತ ನಾಯ್ಕ ಮಾತನಾಡಿ, ತಾಲೂಕಿನ ರೈತರ ಪರವಾಗಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ರೈತರ ಬದುಕಿಗೆ ಸಂಕಷ್ಟ ತಂದೊಡ್ಡುವ ಕ್ರಮ ಕೈಗೊಳ್ಳುತ್ತಿದ್ದರೂ ಸಂಸದರು ಮೌನವಾಗಿದ್ದಾರೆ ಎಂದು ಆರೋಪಿಸಿದರು. ಕಸ್ತೂರಿ ರಂಗನ್ ವರದಿ ವಿರೋಧದ ಹೋರಾಟ ಪ್ರತಿಯೊಬ್ಬರ ಹೋರಾಟವಾಗಬೇಕು ಎಂದು ಕರೆ ನೀಡಿದರು.
ಮಾಧ್ಯಮ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಕನ್ನೇಶ್ ಕೋಲಶಿರ್ಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆಯಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
