ಸಂತೆಯಲ್ಲಿ ಕಳೆದುಕೊಂಡ ₹8 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಪತ್ತೆ; ಮಹಿಳೆಗೆ ಮರಳಿಸಿದ ಪೊಲೀಸರು

ಹೊನ್ನಾವರ: ಸಂತೆ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಚಿನ್ನಾಭರಣ ಮತ್ತು ನಗದು ಹೊಂದಿದ್ದ ವ್ಯಾನಿಟಿ ಬ್ಯಾಗ್‌ನ್ನು ಕರಾವಳಿ ಪೊಲೀಸ್ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ಸಂಶಿ ಗ್ರಾಮದ ಸವಿತಾ ಜಯಂತ ನಾಯ್ಕ ಅವರು ಹೊನ್ನಾವರ ಸಂತೆಗೆ ಬಂದಿದ್ದ ಸಂದರ್ಭದಲ್ಲಿ ಸುಮಾರು 50 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ ₹5 ಸಾವಿರ ನಗದು ಇದ್ದ ವ್ಯಾನಿಟಿ ಬ್ಯಾಗ್‌ನ್ನು ಕಳೆದುಕೊಂಡಿದ್ದರು. ಬ್ಯಾಗ್ ಕಾಣೆಯಾಗಿರುವುದು ತಿಳಿದ ತಕ್ಷಣ ಅವರು ಕರಾವಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಮಾಹಿತಿ ಪಡೆದ ಪಿಎಸ್‌ಐ ವಿಠ್ಠಲ್ ವಡವಾನಿ ಮತ್ತು ಪಿಎಸ್‌ಐ ಸುಧಾ ಅಘನಾಶನಿ ಅವರ ಸೂಚನೆಯಂತೆ ಎಎಸ್‌ಐ ಮನೋಜ್ ತಳೇಕರ್ ಹಾಗೂ ಸಿಬ್ಬಂದಿ ಪತ್ತೆ ಕಾರ್ಯ ಕೈಗೊಂಡರು. ಮಹಿಳೆ ಸಂಚರಿಸಿದ್ದ ಸಂತೆ ಹಾಗೂ ತರಕಾರಿ ಮಾರುಕಟ್ಟೆ ಪ್ರದೇಶದಲ್ಲಿ ವಿಚಾರಣೆ ನಡೆಸಿ ಬ್ಯಾಗ್‌ಗಾಗಿ ಹುಡುಕಾಟ ನಡೆಸಲಾಯಿತು.
ತನಿಖೆಯ ವೇಳೆ ದಾಸನಕೊಪ್ಪದ ಶಫಿ ಮಹಮ್ಮದ್ ಮುಕ್ಬುಲ್ ಸಾಬ್ ಅವರ ತರಕಾರಿ ಅಂಗಡಿಯಲ್ಲಿ ವ್ಯಾನಿಟಿ ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಮತ್ತು ನಗದು ಪರಿಶೀಲಿಸಿದ ಬಳಿಕ ಅವುಗಳನ್ನು ಸವಿತಾ ನಾಯ್ಕ ಅವರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು.
ಕಳೆದುಹೋದ ಅಮೂಲ್ಯ ವಸ್ತುಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸಿದ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
