UK Express Logo

ಕೆಡಿಸಿಸಿ ಬ್ಯಾಂಕ್‌ಗೆ ₹27.35 ಕೋಟಿ ನಿವ್ವಳ ಲಾಭ: ಶಿವರಾಮ ಹೆಬ್ಬಾರ್

By UKExpress on 9/12/2026

ಶಿರಸಿ: ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ (ಕೆಡಿಸಿಸಿ ಬ್ಯಾಂಕ್) 2025-26ನೇ ಸಾಲಿನಲ್ಲಿ ₹27.35 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

ಶನಿವಾರ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಆರ್ಥಿಕ ಪ್ರಗತಿಯ ವಿವರಗಳನ್ನು ನೀಡಿದರು.

ಬ್ಯಾಂಕಿನ ಶೇರು ಬಂಡವಾಳ ₹145.11 ಕೋಟಿಯಿಂದ ₹156.85 ಕೋಟಿಗೆ ಏರಿಕೆಯಾಗಿದೆ. ನಿಧಿಗಳು ₹351.44 ಕೋಟಿಯಿಂದ ₹380.60 ಕೋಟಿಗೆ ಹೆಚ್ಚಳವಾಗಿದ್ದು, ಠೇವಣಿ ಮೊತ್ತ ₹3,569.45 ಕೋಟಿಯಿಂದ ₹4,191.41 ಕೋಟಿಗೆ ಏರಿಕೆಯಾಗಿದೆ ಎಂದು ಹೆಬ್ಬಾರ್ ತಿಳಿಸಿದರು.

ಬ್ಯಾಂಕಿನ ಒಟ್ಟು ಆದಾಯ ₹409.70 ಕೋಟಿಯಾಗಿದ್ದು, ಸಾಲದ ಬಾಕಿ ₹3,384.85 ಕೋಟಿಯಷ್ಟಿದೆ. ದುಡಿಯುವ ಬಂಡವಾಳ ₹5,348.77 ಕೋಟಿಗೆ ತಲುಪಿದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕೃಷ್ಣ ದೇಸಾಯಿ, ನಿರ್ದೇಶಕರಾದ ಪ್ರಕಾಶ ಗುನಗಾ, ವಿಶ್ವನಾಥ ಭಟ್, ರಾಘವೇಂದ್ರ ಶಾಸ್ತ್ರಿ, ರಾಜಗೋಪಾಲ್ ಅಡಿ, ಆರ್.ಎಂ. ಹೆಗಡೆ, ತಿಮ್ಮಯ್ಯ ಹೆಗಡೆ, ಎಂ.ಎ. ಹೆಗಡೆ, ರವಿ ಹೆಗಡೆ, ಸುರೇಶ್ಚಂದ್ರ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.