
ಕುಮಟಾ: ಪೊಲೀಸರ ಅಭಿರಕ್ಷೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಆರೋಪಿಗೆ ಕುಮಟಾ ನ್ಯಾಯಾಲಯ ₹10 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಕುಮಟಾ ಹಂದಿಗೋಣ ನಿವಾಸಿ ಈಶ್ವರ ಮುಕ್ರಿ (21) ದಂಡನೆಗೆ ಗುರಿಯಾದ ಆರೋಪಿ. ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಈತನನ್ನು 2020ರ ಜೂನ್ 6ರಂದು ಜಿಲ್ಲಾ ಸತ್ರ ನ್ಯಾಯಾಲಯ, ಕಾರವಾರಕ್ಕೆ ಹಾಜರುಪಡಿಸಲು ಪೊಲೀಸರು ಕರೆದೊಯ್ಯುತ್ತಿದ್ದರು.
ಈ ವೇಳೆ ಕುಮಟಾ ಹೊಸ ಬಸ್ ನಿಲ್ದಾಣದ ಶೌಚಾಲಯಕ್ಕೆ ಮೂತ್ರ ವಿಸರ್ಜನೆಗೆ ಕರೆದೊಯ್ಯುವಂತೆ ಆರೋಪಿ ಮನವಿ ಮಾಡಿದ್ದ. ಶೌಚಾಲಯದತ್ತ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಪೊಲೀಸರನ್ನು ದೂಡಿ ಹಾಕಿ ಅವರ ಅಭಿರಕ್ಷೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ.
ಘಟನೆ ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ ಜೂನ್ 8ರಂದು ಆರೋಪಿಯನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕುಮಟಾ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ವರ್ಷಶ್ರೀ ಅವರು, ಭಾರತೀಯ ದಂಡ ಸಂಹಿತೆ ಕಲಂ 224ರ ಅಡಿಯಲ್ಲಿ ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ ₹10 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ ಎರಡು ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿದ್ದ ಕುಮಟಾ ಠಾಣೆಯ ಪಿಎಸ್‌ಐ ರವಿ ಗುಡ್ಡಿ ಅವರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಅಣ್ಣಪ್ಪ ಆರ್. ನಾಯ್ಕ ಅವರು ಭಾಗಶಃ ಸಾಕ್ಷಿ ವಿಚಾರಣೆ ನಡೆಸಿದ್ದು, ಉಳಿದ ವಿಚಾರಣೆಯನ್ನು ಸಹಾಯಕ ಸರ್ಕಾರಿ ಅಭಿಯೋಜಕ ಗಿರೀಶ್ ಪಟಗಾರ ಮುಂದುವರಿಸಿ ವಾದ ಮಂಡಿಸಿದ್ದರು.
