UK Express Logo

ಕುಮಟಾದಲ್ಲಿ ದನ ಕಳ್ಳತನ ಪ್ರಕರಣ: 4 ದಿನಗಳೊಳಗೆ ಆರೋಪಿಯ ಬಂಧನ

By UKExpress on 9/13/2026

ಕುಮಟಾ: ಪಟ್ಟಣದ ಬಗ್ಗೋಣ ಬಳಿ ರೈಸ್ ಮಿಲ್ ಪಕ್ಕದ ರಸ್ತೆಯಲ್ಲಿ ಮಲಗಿದ್ದ ದನವನ್ನು ಕಾರಿನಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದ ಪ್ರಕರಣವನ್ನು ಕುಮಟಾ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಘಟನೆ ನಡೆದ ನಾಲ್ಕು ದಿನಗಳೊಳಗೆ ಬೇಧಿಸಿದ್ದಾರೆ.

ಸೆ.10ರಂದು ಬೆಳಗಿನ ಜಾವ ಸುಮಾರು 2.14ರ ವೇಳೆಗೆ ಬಿಳಿ ಬಣ್ಣದ ಕಾರಿನಲ್ಲಿ ಬಂದ ಆರೋಪಿತರು ದನವೊಂದನ್ನು ಹಿಡಿದು ಕಾರಿಗೆ ಹಾಕಿಕೊಂಡು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಕುರಿತು ಬಗ್ಗೋಣದ ನಾಗೇಶ ಲಕ್ಷ್ಮಣ ನಾಯಕ ನೀಡಿದ ದೂರಿನ ಮೇರೆಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ-1 ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾನು ಗುಪ್ತ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ತಂಡವು 60ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿ, ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತನಿಖೆ ಮುಂದುವರಿಸಿತ್ತು.

ಪ್ರಕರಣ ದಾಖಲಾದ ನಾಲ್ಕು ದಿನಗಳೊಳಗೆ ದಕ್ಷಿಣ ಕನ್ನಡ ಜಿಲ್ಲೆಯ ಬಜಪೆಯಲ್ಲಿ ಮಹಮ್ಮದ ಶಚೀರ ಸಮೀರ @ ಗುರ್ಕಾ ಸಮೀರ್ (30) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಮಾರುತಿ ಸುಝುಕಿ ಎರ್ಟಿಗಾ ಕಾರು (KA-20/MC-4268)ನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಕಾಪು, ಉಡುಪಿ ಜಿಲ್ಲೆಯ ಮಹಮ್ಮದ ಅಜೀಮ ಹಾಗೂ ಉಳ್ಳಾಲ, ಮಂಗಳೂರಿನ ಜುಲ್ಲಾನ್ ಮಾಲಿಕ್ ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ.

ಆರೋಪಿ ಪತ್ತೆಗೆ ಕುಮಟಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಯೋಗೇಶ ಕೆ.ಎಂ., ಪಿಎಸ್‌ಐಗಳಾದ ಖಾದರ ಬಾಷಾ, ರವಿ ಗುಡ್ಡಿ, ವಿಠಲ ಮಲವಡಕರ ಹಾಗೂ ಸಿಬ್ಬಂದಿಗಳಾದ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಕಿರಣ ನಾಯ್ಕ ಮತ್ತು ಉಡುಪಿ ಜಿಲ್ಲೆಯ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಶ್ರಮಿಸಿದ್ದಾರೆ.

ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಪೊಲೀಸ್ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದು, ಪ್ರಕರಣವನ್ನು ನಾಲ್ಕು ದಿನಗಳಲ್ಲೇ ಬೇಧಿಸಿರುವ ಕುಮಟಾ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ.