
ಕಾರವಾರ: ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ–2026ರ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನೋ ಮ್ಯಾಪಿಂಗ್ ಹಾಗೂ ತಾರ್ಕಿಕ ವ್ಯತ್ಯಾಸ ಕಂಡುಬಂದಿರುವ 65,330 ಮತದಾರರಿಗೆ ನೋಟಿಸ್ ಜಾರಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಒಟ್ಟು 12,30,037 ಮತದಾರರ ಪೈಕಿ ಶೇ.91.3ರಷ್ಟು ಎನ್ಯೂಮರೇಷನ್ ಫಾರ್ಮ್‌ಗಳನ್ನು ಸಂಗ್ರಹಿಸಿ ಡಿಜಿಟಲೀಕರಣಗೊಳಿಸಲಾಗಿದೆ ಎಂದರು.
ಗೈರುಹಾಜರಿ, ಸ್ಥಳಾಂತರ ಅಥವಾ ಮರಣ ಹೊಂದಿದ 1,07,015 ಮತದಾರರನ್ನು ಹೊರತುಪಡಿಸಿ, ಉಳಿದ ಮತದಾರರ ಹೆಸರುಗಳನ್ನು ಒಳಗೊಂಡ ಕರಡು ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ನೋ ಮ್ಯಾಪಿಂಗ್ ಹಾಗೂ ತಾರ್ಕಿಕ ವ್ಯತ್ಯಾಸ ಹೊಂದಿರುವ ಮತದಾರರಿಗೆ ನೋಟಿಸ್ ಸೃಜಿಸುವ ಕಾರ್ಯ ಆರಂಭವಾಗಿದ್ದು, ಬಿಎಲ್‌ಒಗಳು ಮನೆ-ಮನೆಗೆ ತೆರಳಿ ನೋಟಿಸ್ ವಿತರಿಸಲಿದ್ದಾರೆ ಎಂದು ಹೇಳಿದರು.
ನೋಟಿಸ್ ಪಡೆದ ಮತದಾರರು ಸೂಚಿಸಿರುವ ದಿನಾಂಕ, ಸಮಯ ಹಾಗೂ ಸ್ಥಳದಲ್ಲಿ ನಿಗದಿತ 12 ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾಗುವುದು ಕಡ್ಡಾಯವಾಗಿದೆ. ಮೊದಲ ನೋಟಿಸ್‌ನಲ್ಲಿ ನೀಡಿರುವ ದಿನಾಂಕದಂದು ಹಾಜರಾಗಲು ಸಾಧ್ಯವಾಗದವರಿಗೆ ಮತ್ತೊಂದು ಅವಕಾಶ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಲ್ಲದೆ, ಹೊಸ ಮತದಾರರ ನೋಂದಣಿ, ಹೆಸರು ತಿದ್ದುಪಡಿ ಹಾಗೂ ಸ್ಥಳಾಂತರಕ್ಕೆ ಸಹ ಅವಕಾಶವಿದ್ದು, ಈ ಸಂಬಂಧ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 23ರವರೆಗೆ ಕಾಲಾವಕಾಶ ಇದೆ ಎಂದರು.
ನೋ ಮ್ಯಾಪಿಂಗ್ ಹಾಗೂ ತಾರ್ಕಿಕ ವ್ಯತ್ಯಾಸ ಪ್ರಕರಣಗಳಲ್ಲಿ ಮತದಾರರು ಸಲ್ಲಿಸುವ ದಾಖಲೆಗಳ ಪರಿಶೀಲನೆಗಾಗಿ 145 ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರಕ್ರಿಯೆಯನ್ನು ಅತ್ಯಂತ ಎಚ್ಚರಿಕೆಯಿಂದ ನಡೆಸಲಾಗುತ್ತಿದ್ದು, ಜಿಲ್ಲೆಯ ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆ. ಲಕ್ಷ್ಮೀಪ್ರಿಯಾ ಹೇಳಿದರು.
ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಹಾಗೂ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಉಪಸ್ಥಿತರಿದ್ದರು.
