₹1.31 ಕೋಟಿ ವೆಚ್ಚದಲ್ಲಿ ಹೊನ್ನಾವರದ 8 ಕಡೆ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ ಶಾಸಕ ದಿನಕರ ಶೆಟ್ಟಿ
ಹೊನ್ನಾವರ: ಪಟ್ಟಣದ ವಿವಿಧೆಡೆ ₹1.31 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಕುಮಟಾ–ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಕೆ. ಶೆಟ್ಟಿ ಚಾಲನೆ ನೀಡಿದರು.
ಪಟ್ಟಣದ ರಾಮತೀರ್ಥ ಕ್ರಾಸ್–ವಡಗೇರಿ ರಸ್ತೆ, ಸುವಿಧಾ ಆಸ್ಪತ್ರೆ ರಸ್ತೆ, ಬಾಂದೆಹಳ್ಳ, ಸೆಂಟ್ ಥಾಮಸ್ ಪ್ರೌಢಶಾಲೆಯ ಮುಂಭಾಗ, ಲಕ್ಷ್ಮೀನಾರಾಯಣ ನಗರ, ಮೂರುಕಟ್ಟೆ, ಸರ್ಪಿ ಸೆಂಟರ್ ಹಾಗೂ ಬಜಾರ್ ರಸ್ತೆ ಸೇರಿದಂತೆ ಒಟ್ಟು 8 ಕಡೆಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳು ನಡೆಯಲಿವೆ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಕಾರಣ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿತ್ತು. ಕಳೆದ ಬಾರಿ ಕ್ಷೇತ್ರಕ್ಕೆ ನೀಡಲಾದ ₹25 ಕೋಟಿ ಅನುದಾನದಲ್ಲಿ ₹1.31 ಕೋಟಿಯನ್ನು ಹೊನ್ನಾವರ ಪಟ್ಟಣದ ರಸ್ತೆ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಹಿಂದೆ ಶಾಸಕರ ನಿಧಿಯಿಂದ ಪಟ್ಟಣದ ವಿವಿಧೆಡೆ 25ಕ್ಕೂ ಹೆಚ್ಚು ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ₹1 ಕೋಟಿ ಅನುದಾನ ನೀಡುವುದೇ ದೊಡ್ಡ ಸಾಧನೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಅವರು ₹2 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಅದರಲ್ಲಿ ₹1 ಕೋಟಿಯನ್ನು ಹೊನ್ನಾವರ ಪಟ್ಟಣದ ರಸ್ತೆ ಅಭಿವೃದ್ಧಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಅಂಕೋಲಾ ಪುರಸಭೆ, ಮಂಕಿ ಪಟ್ಟಣ ಪಂಚಾಯಿತಿ ಹಾಗೂ ಹೊನ್ನಾವರ ಪಟ್ಟಣ ಪಂಚಾಯಿತಿಗೆ ಒಬ್ಬರೇ ಇಂಜಿನಿಯರ್ ಇರುವುದರಿಂದ ಕಾಮಗಾರಿಗಳ ನಿರ್ವಹಣೆಯಲ್ಲಿ ತೊಂದರೆಯಾಗುತ್ತಿದೆ. ಮಳೆಗಾಲ ಮುಗಿದ ಬಳಿಕ ಡಾಂಬರೀಕರಣದ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.
ಈ ವೇಳೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಯೇಸು ಬೆಂಗಳೂರು, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಎಂ.ಎಸ್. ನಾಯ್ಕ, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶಿವರಾಜ ಮೇಸ್ತ, ನಾಗರಾಜ ಭಟ್, ವಿಜಯ ಕಾಮತ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರು, ಬಿಜೆಪಿ ಮಂಡಲ ಅಧ್ಯಕ್ಷ ಯೋಗೀಶ ಮೇಸ್ತ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಘವ ಬಾಳೇರಿ, ಯಧುವೀರ ಕೋ-ಆಪರೇಟಿವ್ ಅಧ್ಯಕ್ಷ ಶ್ರೀಕಾಂತ ನಾಯ್ಕ, ಬಿಜೆಪಿ ಮುಖಂಡರಾದ ರಾಜೇಶ ಭಂಡಾರಿ, ರವಿ ನಾಯ್ಕ ರಾಯಲಕೇರಿ, ಎಂ.ಎಸ್. ಹೆಗಡೆ ಕಣ್ಣಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
