UK Express Logo

ಪ್ರತಿ ಗರ್ಭಿಣಿಗೂ ತಾಯಿ ಕಾರ್ಡ್ ಕಡ್ಡಾಯ: ಜಿಲ್ಲಾಧಿಕಾರಿ ಸೂಚನೆ

By UKExpress on 9/9/2026

ಕಾರವಾರ: ಗರ್ಭಧಾರಣೆ ದೃಢಪಟ್ಟ ಪ್ರತಿಯೊಬ್ಬ ಮಹಿಳೆಗೂ ಕಡ್ಡಾಯವಾಗಿ ತಾಯಿ ಕಾರ್ಡ್ ವಿತರಿಸಿ, ಮಗು ಜನಿಸುವವರೆಗೆ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಜಿಲ್ಲಾ ಪಂಚಾಯತ್‌ನ ಕೆಸ್ವಾನ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಜಿಲ್ಲಾ ಆರೋಗ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗರ್ಭಿಣಿಯರನ್ನು ತಾಯಿ ಕಾರ್ಡ್‌ಗೆ ನೋಂದಾಯಿಸಿದ ಬಳಿಕ ವಿವಿಧ ಇಲಾಖೆಗಳ ಮೂಲಕ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಅವರಿಗೆ ತಲುಪಿಸಬೇಕು. ಗರ್ಭಿಣಿಯರಿಗೆ ನಿರಂತರ ಆರೋಗ್ಯ ತಪಾಸಣೆ ಹಾಗೂ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣೆ ಪಡೆಯುತ್ತಿರುವ ಗರ್ಭಿಣಿಯರ ಮಾಹಿತಿಯನ್ನು ಪಡೆದು, ಅವರಿಗೂ ತಾಯಿ ಕಾರ್ಡ್ ವಿತರಿಸಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು. ಸಕಾಲದಲ್ಲಿ ಅಗತ್ಯ ಲಸಿಕೆಗಳು ಹಾಗೂ ಔಷಧಗಳನ್ನು ಉಚಿತವಾಗಿ ವಿತರಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಜುಲೈವರೆಗೆ ಒಟ್ಟು 5,053 ಹೆರಿಗೆಗಳು ಸಂಭವಿಸಿದ್ದು, ಈ ಪೈಕಿ 2,211 ಸಿ-ಸೆಕ್ಷನ್ ಹೆರಿಗೆಗಳು ನಡೆದಿವೆ. ಜಿಲ್ಲೆಯಲ್ಲಿ ಸಿ-ಸೆಕ್ಷನ್ ಹೆರಿಗೆಯ ಪ್ರಮಾಣ ಶೇ.44ರಷ್ಟಿದೆ. ಈ ಅವಧಿಯಲ್ಲಿ ಯಾವುದೇ ತಾಯಿ ಮರಣ ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಆರೋಗ್ಯ ಇಲಾಖೆಯ ಎಲ್ಲ ಲಸಿಕಾ ಕಾರ್ಯಕ್ರಮಗಳಲ್ಲಿ ನಿಗದಿತ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಆಸ್ಪತ್ರೆಗಳಲ್ಲಿನ ಔಷಧಗಳ ದಾಸ್ತಾನುಗಳನ್ನು ನಿರಂತರವಾಗಿ ಪರಿಶೀಲಿಸಿ, ಯಾವುದೇ ಔಷಧದ ಕೊರತೆಯಾಗದಂತೆ ಗರಿಷ್ಠ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ, ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ದಾಖಲಾಗುವ ರೋಗಿಯು ಸಂಪೂರ್ಣ ಗುಣಮುಖರಾಗುವವರೆಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಬಾರದು. ರೋಗಿಯ ಆರೋಗ್ಯದಲ್ಲಿ ಸಂಪೂರ್ಣ ಸುಧಾರಣೆ ಕಂಡುಬಂದ ಬಳಿಕವೇ ಡಿಸ್ಚಾರ್ಜ್ ಮಾಡಬೇಕು ಎಂದು ತಿಳಿಸಿದರು.

ನವಜಾತ ಶಿಶುಗಳ ಆರೋಗ್ಯದ ಬಗ್ಗೆ ಆಸ್ಪತ್ರೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ತಾಯಂದಿರಿಗೆ ನವಜಾತ ಶಿಶುವಿನ ಪಾಲನೆ ಮತ್ತು ಪೋಷಣೆ ಕುರಿತು ಅವರಿಗೂ ಸಂಪೂರ್ಣವಾಗಿ ಅರ್ಥವಾಗುವ ಭಾಷೆಯಲ್ಲಿ ಸುರಕ್ಷಿತ ಪಾಲನಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಅಲ್ಲದೆ, ಆಸ್ಪತ್ರೆಗಳಲ್ಲಿ ಹಾವು ಕಡಿತ ಹಾಗೂ ನಾಯಿ ಕಡಿತಕ್ಕೆ ಅಗತ್ಯವಿರುವ ಔಷಧಗಳ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಜಯ ದೊಡ್ಡಮನಿ, ಆರ್‌ಸಿಎಚ್ ಅಧಿಕಾರಿ ಡಾ. ನಟರಾಜ್, ಕಾರ್ಯಕ್ರಮ ಅಧಿಕಾರಿಗಳಾದ ಡಾ. ಶಂಕರ್ ರಾವ್, ಕ್ಯಾ. ಡಾ. ರಮೇಶ್ ರಾವ್, ಡಾ. ಅಶ್ವಿನಿ ಬೋರ್ಕರ್, ಡಾ. ಪ್ರಸನ್ನ, ಕ್ರಿಮ್ಸ್‌ನ ವೈದ್ಯ ಡಾ. ಹೇಮಗಿರಿ ಹಾಗೂ ಆರೋಗ್ಯ ಇಲಾಖೆಯ ಎಲ್ಲ ತಾಲೂಕು ವೈದ್ಯಾಧಿಕಾರಿಗಳು ವರ್ಚುವಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.