UK Express Logo

ಸೆ.2, 3ರಂದು ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯ

By UKExpress on 9/9/2026

ಕಾರವಾರ: ನಿರ್ವಹಣೆ ಹಾಗೂ ತುರ್ತು ಕಾಮಗಾರಿಗಳ ಹಿನ್ನೆಲೆಯಲ್ಲಿ ಕುಮಟಾ, ಹೊನ್ನಾವರ, ದಾಂಡೇಲಿ ಮತ್ತು ಕಾರವಾರ ತಾಲೂಕುಗಳ ವಿವಿಧ ಪ್ರದೇಶಗಳಲ್ಲಿ ಸೆಪ್ಟೆಂಬರ್ 2 ಮತ್ತು 3ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ಕುಮಟಾ: 33 ಕೆ.ವಿ. ಗೋಕರ್ಣ ಮಾರ್ಗದಲ್ಲಿ ಜಂಗಲ್‌ ಕಟ್ಟಿಂಗ್ ಕಾರ್ಯ ಕೈಗೊಳ್ಳಲಾಗುತ್ತಿರುವುದರಿಂದ ಸೆ.2ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಮಾದನಗೇರಿ, ಗೋಕರ್ಣ, ತದಡಿ, ಬಂಕಿಕೊಡ್ಲ, ಬಿಜ್ಜೂರ, ಗಂಗಾವಳಿ, ಓಂ ಬೀಚ್, ಮಿರ್ಜಾನ್, ಕೋಡ್ಕಣಿ, ನಾಗೂರು, ಖಂಡಗಾರ, ಬರ್ಗಿ, ಉಪ್ಪಿನಪಟ್ಟಣ ಹಾಗೂ ದಿವಗಿ ಮಾರ್ಗದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹೊನ್ನಾವರ: ಪಟ್ಟಣ ಶಾಖೆಯ ಎಲ್‌ಐಸಿ ಫೀಡರ್ 11 ಕೆ.ವಿ. ಮಾರ್ಗ ಹಾಗೂ ಗೇರುಸೊಪ್ಪ ಶಾಖೆಯ ಮಾಗೋಡ ಫೀಡರ್ 11 ಕೆ.ವಿ. ಮಾರ್ಗದ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸೆ.2ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ದಾಂಡೇಲಿ: 11 ಕೆ.ವಿ. ಮಾರ್ಗದ ತುರ್ತು ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಸೆ.2ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ನವಗ್ರಾಮ, ಗಾಂಧಿನಗರ, ಪಟೇಲನಗರ, ಹಳೇ ದಾಂಡೇಲಿ, ಬೈಲಪಾರ್, ಕೋಗಿಲಬನ, ಜನತಾ ಕಾಲೋನಿ, ಕುಳಗಿ ರೋಡ್ ಹಾಗೂ ಜೆ.ಎನ್. ರೋಡ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಅದೇ ರೀತಿ ಸೆ.3ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಅಂಬೇವಾಡಿ, ಕೈಗಾರಿಕಾ ಪ್ರದೇಶ, ಗಣೇಶನಗರ, ಸಾಯಿನಗರ, ಮಾರುತಿನಗರ, ಗಾಂಧಿನಗರ, 14ನೇ ಬ್ಲಾಕ್, ಗಾಂವಟನ್, ಟೌನ್‌ಶಿಪ್, ವನಶ್ರೀನಗರ, ವಿಜಯನಗರ, ಇವಿಎಸ್, ಕೆಎಚ್‌ಬಿ ಕಾಲೋನಿ, ಬಸವೇಶ್ವರನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಕಾರವಾರ: ಕಾರವಾರದ 220 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಸೆ.2ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕಾರವಾರ ತಾಲೂಕಿನಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ನಿಗದಿತ ಸಮಯದಲ್ಲಿ ವಿದ್ಯುತ್‌ ಅವಲಂಬಿತ ಕಾರ್ಯಗಳನ್ನು ಮುಂಚಿತವಾಗಿ ಪೂರ್ಣಗೊಳಿಸಿಕೊಂಡು, ಸಾರ್ವಜನಿಕರು ಹೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.