UK Express Logo

ಗುಣವಂತೇಶ್ವರ ಸಭಾಭವನಕ್ಕೆ ಸರ್ಕಾರದಿಂದ ₹1 ಕೋಟಿ ಕೊಡಿಸುವೆ: ಮಂಕಾಳು ವೈದ್ಯ

By UKExpress on 9/9/2026

ಹೊನ್ನಾವರ: ತಾಲೂಕಿನ ಗುಣವಂತೆ ಶಂಭುಲಿಂಗೇಶ್ವರ ದೇವಸ್ಥಾನದ ವತಿಯಿಂದ ಸುಮಾರು ₹6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಗುಣವಂತೇಶ್ವರ ಸಭಾಭವನಕ್ಕೆ ಸರ್ಕಾರದಿಂದ ₹1 ಕೋಟಿ ಅನುದಾನ ಕೊಡಿಸುವುದಾಗಿ ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷ ಮಂಕಾಳು ವೈದ್ಯ ಭರವಸೆ ನೀಡಿದರು.

ಅಲ್ಲದೆ, ಸಭಾಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿಯೂ ಸಹಾಯ ಮಾಡುವುದಾಗಿ ತಿಳಿಸಿದ ಅವರು, ಒಂದು ವರ್ಷದೊಳಗೆ ಸಭಾಭವನದ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವಂತೆ ಕಾರ್ಯನಿರ್ವಹಿಸೋಣ ಎಂದರು.

ಗುಣವಂತೇಶ್ವರ ಸಭಾಭವನದ ಅಡಿಗಲ್ಲು ಸಮಾರಂಭ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಂಚಕ್ಷೇತ್ರಗಳಲ್ಲಿ ಒಂದಾಗಿರುವ ಗುಣವಂತೆ ದೇವಸ್ಥಾನ ಜಗತ್ಪ್ರಸಿದ್ಧವಾಗಿದೆ. ದೇಶದ ವಿವಿಧ ಭಾಗಗಳಿಂದ ಭಕ್ತರು ಹಾಗೂ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕಿದೆ ಎಂದರು.

ಮುರುಡೇಶ್ವರ ಹಾಗೂ ಗೋಕರ್ಣದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದೆ. ಪಂಚಕ್ಷೇತ್ರಗಳಾದ ಮುರುಡೇಶ್ವರ, ಗುಣವಂತೇಶ್ವರ, ದಾರೇಶ್ವರ, ಗೋಕರ್ಣೇಶ್ವರ ಹಾಗೂ ಸಜ್ಜೆಶ್ವರದಲ್ಲಿ ಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂಬುದು ತಮ್ಮ ವೈಯಕ್ತಿಕ ಆಶಯವಾಗಿದೆ ಎಂದು ಮಂಕಾಳು ವೈದ್ಯ ಹೇಳಿದರು.

ಶಿವರಾತ್ರಿ ಸಂದರ್ಭದಲ್ಲಿ ರಾತ್ರಿ ಜಾಗರಣೆಯಿಂದ ಬೆಳಗಿನವರೆಗೆ ದೇವರ ಧ್ಯಾನ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಂತಾಗಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಅವರು ಹೇಳಿದರು.

ಗುಣವಂತೆ ದೇವಸ್ಥಾನ ಇದೀಗ ದೇಶವ್ಯಾಪಿ ಪ್ರಸಿದ್ಧಿ ಪಡೆದಿದ್ದು, ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ದೇವಸ್ಥಾನದ ಅಭಿವೃದ್ಧಿ, ಸಭಾಂಗಣ ನಿರ್ಮಾಣ ಹಾಗೂ ಕೆರೆ ಅಭಿವೃದ್ಧಿಯನ್ನು ಜನರ ಅನುಕೂಲಕ್ಕಾಗಿ ಕೈಗೊಳ್ಳಲಾಗುತ್ತಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನರಸಿಂಹ ಪಂಡಿತ ಹೇಳಿದರು.

ಸಭಾಂಗಣ ನಿರ್ಮಾಣ ಪೂರ್ಣಗೊಂಡ ಬಳಿಕ ಕೆರೆ ಅಭಿವೃದ್ಧಿ ಕೈಗೊಳ್ಳಲಾಗುವುದು. ಅಲ್ಲದೆ, 50 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಿಸಿ, ನೀರು ಕೆರೆಗೆ ಹರಿದುಬರುವಂತೆ ‘ಗಂಗಾವತರಣ’ ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಕಮಿಟಿಯ ಶಿವಾನಂದ ಗೌಡ, ಶಿವಾನಂದ ನಾಯ್ಕ, ಎಂ.ವಿ. ಹೆಗಡೆ, ಸುಬ್ರಾಯ ಆಚಾರಿ, ಅಣ್ಣಪ್ಪ ಗೌಡ ಮಾದಿ, ಧರ್ಮ ನಾಯ್ಕ, ನಾಗರಾಜ ಬಂಡಾರಿ, ಹರಿಶ್ಚಂದ್ರ ದೇಶಬಂಡಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ಚಂದ್ರಶೇಖರ ಗೌಡ, ಗಣಪ್ಪಯ್ಯ ಗೌಡ, ಕೃಷ್ಣ ಗೌಡ, ವಿಕ್ರಂ ನಾಯ್ಕ, ಅಣ್ಣಪ್ಪ ನಾಯ್ಕ, ಅಣ್ಣಪ್ಪ ಗೌಡ, ಮಾಲ್ಲ ಗೌಡ, ತಿಮ್ಮಪ್ಪ ಗೌಡ, ಗಜು ನಾಯ್ಕ ಮಂಕಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಎಂ.ಎಸ್. ಹೆಗಡೆ ಸ್ವಾಗತಿಸಿದರು. ನಾಗಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋವಿಂದ ಗೌಡ ವಂದಿಸಿದರು. ಎಚ್.ಎಸ್. ಗೌಡ ಕಾರ್ಯಕ್ರಮ ನಿರೂಪಿಸಿದರು.