UK Express Logo
BREAKING

ಉತ್ತರ ಕನ್ನಡದಲ್ಲಿ ಕರ್ತವ್ಯ ನಿರ್ವಹಿಸಿದ್ದು ಮರೆಯಲಾಗದ ಅನುಭವ: ನಿರ್ಗಮಿತ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ

By UKExpress on 11/11/2026

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ 2 ವರ್ಷ 4 ತಿಂಗಳು ಕರ್ತವ್ಯ ನಿರ್ವಹಿಸಿರುವುದು ಅತ್ಯಂತ ಸುಂದರ ಹಾಗೂ ಮರೆಯಲಾಗದ ಅನುಭವ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಹೇಳಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಾರ್ವಜನಿಕರು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ರಾಜಕೀಯ ಪಕ್ಷಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ನೀಡಿದ ಸಹಕಾರವನ್ನು ಸ್ಮರಿಸಿದರು.

ಶಿರೂರು ಗುಡ್ಡಕುಸಿತ ದುರಂತ, ಕಾಳಿ ಸೇತುವೆ ಕುಸಿತ, ಜನಗಣತಿ ಹಾಗೂ ಎಸ್‌ಐಆರ್ ಕಾರ್ಯಗಳ ಸಂದರ್ಭದಲ್ಲಿ ಎಲ್ಲರಿಂದಲೂ ಉತ್ತಮ ಸಹಕಾರ ದೊರೆತಿದೆ. ಹಿಂದಿನ ಜಿಲ್ಲೆಗಳಿಗಿಂತಲೂ ಉತ್ತರ ಕನ್ನಡ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಅತ್ಯುತ್ತಮ ಸಹಕಾರ ಸಿಕ್ಕಿದೆ. ಉತ್ತಮ ನೆನಪುಗಳೊಂದಿಗೆ ಜಿಲ್ಲೆಯಿಂದ ನಿರ್ಗಮಿಸುತ್ತಿದ್ದೇನೆ ಎಂದರು.

ಶಾಸಕ ಸತೀಶ್ ಸೈಲ್ ಮಾತನಾಡಿ, ಹಲವು ಸವಾಲುಗಳ ನಡುವೆಯೂ ದಿಟ್ಟತನದಿಂದ ಕಾರ್ಯನಿರ್ವಹಿಸಿದ ಕೆ. ಲಕ್ಷ್ಮಿಪ್ರಿಯಾ ಅವರು ತಮ್ಮ ಉತ್ತಮ ಕಾರ್ಯವೈಖರಿಯಿಂದ ಜಿಲ್ಲೆಯಲ್ಲಿ ಹಲವು ನೆನಪಿನಲ್ಲುಳಿಯುವ ಕೆಲಸಗಳನ್ನು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೂತನ ಜಿಲ್ಲಾಧಿಕಾರಿ ಬೋಯರ್ ಹರ್ಷಲ್ ನಾರಾಯಣ ರಾವ್ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವ ಮೂಲಕ ಉತ್ತಮ ಆಡಳಿತ ನೀಡಲು ಎಲ್ಲರೂ ಸಹಕರಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರು ಮಾತನಾಡಿ, ಶಿರೂರು ಗುಡ್ಡಕುಸಿತ ಮತ್ತು ಕಾಳಿ ಸೇತುವೆ ದುರಂತದ ಸಂದರ್ಭದಲ್ಲಿನ ಕಾರ್ಯನಿರ್ವಹಣೆ, ಕೇಣಿ ಬಂದರು ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳ ಸಾರ್ವಜನಿಕ ಅಹವಾಲು ಸಭೆಗಳು, ಕಡತಗಳ ತ್ವರಿತ ವಿಲೇವಾರಿ, ಬಗರ್ ಹುಕುಂ ಅಡಿಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಹಕ್ಕುಪತ್ರ ವಿತರಣೆ, ಕಂದಾಯ ಸಿಬ್ಬಂದಿಗೆ ಪದೋನ್ನತಿ ಹಾಗೂ ಎಂಟು ವರ್ಷಗಳ ಬಳಿಕ ಕರಾವಳಿ ಉತ್ಸವ ಆಯೋಜನೆ ಸೇರಿದಂತೆ ಹಲವು ಸಾಧನೆಗಳನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಜಿಲ್ಲಾ ಪಂಚಾಯತ್ ಸಿಇಒ ಡಾ. ದಿಲೀಷ್ ಶಶಿ, ಉಪ ವಿಭಾಗಾಧಿಕಾರಿ ರಮ್ಯಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು, ನಿರ್ಗಮಿತ ಮತ್ತು ನೂತನ ಜಿಲ್ಲಾಧಿಕಾರಿಗಳನ್ನು ಅಭಿನಂದಿಸಿದರು.