UK Express Logo
BREAKING

ಚಿರತೆ ಕಾಣಿಸಿಕೊಂಡು ಭಯಭೀತರಾದ ಪ್ರವಾಸಿಗರಿಗೆ ನೆರವಾದ ಗೋಕರ್ಣ ಪೊಲೀಸರು

By UKExpress on 11/11/2026

ಗೋಕರ್ಣ: ಓಂ ಬೀಚ್‌ನಿಂದ ಕುಡ್ಲೆ ಬೀಚ್‌ನಲ್ಲಿರುವ ರೆಸಾರ್ಟ್‌ಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ಚಿರತೆ ಕಾಣಿಸಿಕೊಂಡು ಭಯಭೀತರಾದ ಪಶ್ಚಿಮ ಬಂಗಾಳದ ನಾಲ್ವರು ಪ್ರವಾಸಿಗರನ್ನು ಗೋಕರ್ಣ ಪೊಲೀಸರು ಸುರಕ್ಷಿತವಾಗಿ ಅವರ ವಾಸ್ತವ್ಯ ಸ್ಥಳಕ್ಕೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ನವೆಂಬರ್ 8ರಂದು ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಪಶ್ಚಿಮ ಬಂಗಾಳದಿಂದ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ ನಾಲ್ವರು ಪ್ರವಾಸಿಗರು ಓಂ ಬೀಚ್‌ನಿಂದ ಕುಡ್ಲೆ ಬೀಚ್‌ನಲ್ಲಿರುವ ತಮ್ಮ ರೆಸಾರ್ಟ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಚಿರತೆಯೊಂದು ಕಾಣಿಸಿಕೊಂಡು ರಸ್ತೆಯ ಮಧ್ಯದಲ್ಲಿ ನಿಂತಿತ್ತು. ಇದರಿಂದ ಆತಂಕಗೊಂಡ ಪ್ರವಾಸಿಗರು ತಕ್ಷಣ ಗೋಕರ್ಣ ಪೊಲೀಸ್ ಠಾಣೆಗೆ ಕರೆ ಮಾಡಿ ಸಹಾಯ ಕೋರಿದ್ದರು.

ಕರೆ ಸ್ವೀಕರಿಸಿದ ಕೂಡಲೇ ಕಾರ್ಯಪ್ರವೃತ್ತರಾದ ಗೋಕರ್ಣ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ರಾಜೇಶ್ ನಾಯ್ಕ, ಪರಮೇಶ್ವರ ಬೆಂಡಲಗಟ್ಟಿ ಹಾಗೂ ಪ್ರಕಾಶ್ ಮಳ್ಳಿ ಅವರು ಸರ್ಕಾರಿ ವಾಹನದಲ್ಲಿ ಸೈರನ್ ಮೊಳಗಿಸುತ್ತಾ ಸ್ಥಳಕ್ಕೆ ಧಾವಿಸಿದರು. ಬಳಿಕ ಆತಂಕಗೊಂಡಿದ್ದ ಪ್ರವಾಸಿಗರಿಗೆ ಧೈರ್ಯ ತುಂಬಿ, ಪೊಲೀಸ್ ವಾಹನದಲ್ಲಿಯೇ ಸುರಕ್ಷಿತವಾಗಿ ಕುಡ್ಲೆ ಬೀಚ್‌ನಲ್ಲಿರುವ ರೆಸಾರ್ಟ್‌ಗೆ ತಲುಪಿಸಿದರು.

ಪೊಲೀಸರ ತಕ್ಷಣದ ಸ್ಪಂದನೆ, ಸಮಯಪ್ರಜ್ಞೆ ಹಾಗೂ ಮಾನವೀಯ ಕಾಳಜಿಗೆ ಪ್ರವಾಸಿಗರು ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸಿದ ಮೂವರು ಪೊಲೀಸ್ ಸಿಬ್ಬಂದಿಗಳ ಸೇವೆಯನ್ನು ಶ್ಲಾಘಿಸಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ, ಅವರನ್ನು ಅಭಿನಂದಿಸಿ ಬಹುಮಾನ ಘೋಷಿಸಿದೆ.

ಪ್ರವಾಸಿಗರ ಸಂಕಷ್ಟದ ಸಮಯದಲ್ಲಿ ತಕ್ಷಣ ನೆರವಿಗೆ ಧಾವಿಸಿದ ಗೋಕರ್ಣ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.