
ಮುಂಡಗೋಡ: ಮನೆಯ ವಾಷಿಂಗ್ ಮಷಿನ್ ದುರಸ್ತಿ ಮಾಡಲು ಮುಂದಾದ 19 ವರ್ಷದ ಯುವಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಕ್ಕೊಳಗಾಗಿ ಮೃತಪಟ್ಟಿರುವ ದುರ್ಘಟನೆ ಮುಂಡಗೋಡ ಪಟ್ಟಣದ ಹಳೂರ ಓಣಿಯಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಹಳೂರ ಓಣಿಯ ನಿವಾಸಿ ಬಶೀರಅಹ್ಮದ ಬಂಡಿ ಅವರ ಪುತ್ರ ಮಹ್ಮದ ಸಾಕೀಬ (19) ಮೃತಪಟ್ಟ ಯುವಕ. ಮನೆಯಲ್ಲಿ ಬಟ್ಟೆ ತೊಳೆಯಲು ಬಳಸುವ ವಾಷಿಂಗ್ ಮಷಿನ್ಗೆ ವಿದ್ಯುತ್ ಸಂಪರ್ಕ ಬಾರದ ಹಿನ್ನೆಲೆಯಲ್ಲಿ ಅದನ್ನು ಸರಿಪಡಿಸಲು ಮುಂದಾಗಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಕ್ಕೊಳಗಾಗಿ ಕೆಳಗೆ ಬಿದ್ದಿದ್ದಾನೆ.
ಕೂಡಲೇ ಆತನನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರೀಕ್ಷಿಸಿದ ವೈದ್ಯಾಧಿಕಾರಿಗಳು ಯುವಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮೃತ ಯುವಕನ ತಂದೆ ಬಶೀರಅಹ್ಮದ ಅವರು ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಗನ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್. ಪ್ರಕರಣ ದಾಖಲಾಗಿದ್ದು, ಪಿ.ಎಸ್.ಐ ಮಂಜುನಾಥ ಗೌಡರ ಅವರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
