
ಯಲ್ಲಾಪುರ: ತಾಲೂಕಿನ ಮೂಲೆಗುಂಡ್ಕಲ್ ಗ್ರಾಮದ ರಾಮಚಂದ್ರ ಭಟ್ಟ ಅವರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಯಲ್ಲಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಹುಟಕಮನೆ ಗ್ರಾಮದ ಜನರು ಮಂಗಳವಾರ ಸನ್ಮಾನಿಸಿ ಗೌರವಿಸಿದರು.
ಕಠಿಣ ಸವಾಲಾಗಿದ್ದ ದರೋಡೆ ಪ್ರಕರಣವನ್ನು ಸಮಗ್ರ ತನಿಖೆಯ ಮೂಲಕ ಅಲ್ಪಾವಧಿಯಲ್ಲೇ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯವೈಖರಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಪಿಐ ಸುರೇಶ ಕುಂಬಾರ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳತನ ಹಾಗೂ ದರೋಡೆ ಪ್ರಕರಣಗಳನ್ನು ತಡೆಗಟ್ಟಲು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ತಿಳಿಸಿದರು. ಒಂಟಿ ಮನೆಗಳಲ್ಲಿ ಹಾಗೂ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಉತ್ತಮ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು. ಇವು ಅಪರಾಧಗಳನ್ನು ತಡೆಗಟ್ಟುವುದರ ಜೊತೆಗೆ ಘಟನೆ ನಡೆದ ಸಂದರ್ಭದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತವೆ ಎಂದರು.
ಹೊರಗಿನಿಂದ ಕೆಲಸಕ್ಕೆ ಬರುವವರ ಸಂಪೂರ್ಣ ಮಾಹಿತಿ ಸಂಗ್ರಹಿಸುವುದು, ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸುವುದು ಹಾಗೂ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಬೀಟ್ ಪೊಲೀಸರಿಗೆ ಮಾಹಿತಿ ನೀಡುವುದು ಮುಖ್ಯ ಎಂದು ಸಲಹೆ ನೀಡಿದರು.
ಪಿಎಸ್ಐ ರಾಜಶೇಖರ ವಂದಲಿ ಮಾತನಾಡಿ, ಮನೆ ಹಾಗೂ ತೋಟಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವವರ ಗುರುತು ಮತ್ತು ಪೂರ್ವಾಪರಗಳನ್ನು ಪರಿಶೀಲಿಸಬೇಕು. ಕೆಲಸಗಾರರ ಚಲನವಲನಗಳ ಮೇಲೂ ನಿಗಾ ಇರಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ದರೋಡೆ ಪ್ರಕರಣದ ತನಿಖೆ ಅತ್ಯಂತ ಸವಾಲಿನಿಂದ ಕೂಡಿತ್ತು. ರಾಮಚಂದ್ರ ಭಟ್ಟ ಅವರ ತಾಯಿ ಶಾರದಾ ಭಟ್ಟ ಅವರು ತೋರಿದ ಧೈರ್ಯ ಹಾಗೂ ಕುಟುಂಬದವರು ನೀಡಿದ ಮಾಹಿತಿಯು ಆರೋಪಿಗಳನ್ನು ಪತ್ತೆಹಚ್ಚಲು ಮಹತ್ವದ ನೆರವು ನೀಡಿದೆ ಎಂದು ಪೊಲೀಸರು ತಿಳಿಸಿದರು. ಹಿರಿಯ ನಾಗರಿಕರು ವಾಸಿಸುವ ಮನೆಗಳಿಗೆ 15 ದಿನಗಳಿಗೊಮ್ಮೆ ಪೊಲೀಸ್ ಭೇಟಿ ನೀಡುವ ವ್ಯವಸ್ಥೆಯ ಪ್ರಯೋಜನ ಪಡೆದುಕೊಳ್ಳುವಂತೆಯೂ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಸಿಪಿಐ ಸುರೇಶ ಕುಂಬಾರ, ಪಿಎಸ್ಐ ರಾಜಶೇಖರ ವಂದಲಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಮಹಮದ್ ಶಫೀ ಶೇಖ್, ಮಹಾವೀರ ಡಿ.ಎಸ್., ವಿಶ್ವನಾಥ ಜಾಯನಗೌಡರ್, ರಾಜಪ್ಪ ದನಗರ್, ಮಾರುತಿ ಕೆ.ಎಚ್., ಸುರೇಶ ಕಂಟ್ರಾಕ್ಟರ್, ಗಂಗಾಧರ ಚಲವಾದಿ ಮತ್ತು ಪರಮೇಶ್ವರ ಎಸ್.ಕೆ. ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ನರಸಿಂಹ ಭಟ್ಟ ಬೋಳಪಾಲ್, ಎಂ.ಜಿ. ಭಟ್ಟ ಶೀಗೇಪಾಲ್, ಆರ್.ಎಸ್. ಭಟ್ಟ ಶೀಗೇಪಾಲ್, ಪ್ರಶಾಂತ ಸಭಾಹಿತ, ರಾಮಕೃಷ್ಣ ಅಲ್ವೇಗದ್ದೆ, ಮಂಜುನಾಥ ಕೊಂಬೇಪಾಲ್ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.
