
ಭಟ್ಕಳ ತಾಲೂಕಿನ ಕಾಯ್ಕಿಣಿ ಗ್ರಾಮದ ಅಗ್ಲಹೊಳೆಯ ನಿವಾಸಿ, 38 ವರ್ಷದ ಆಟೋ ರಿಕ್ಷಾ ಚಾಲಕ ಪ್ರಮೋದ ದೇವಿದಾಸ ಮಡಿವಾಳ ನಾಪತ್ತೆಯಾಗಿದ್ದಾರೆ.
ಅಕ್ಟೋಬರ್ 8ರಂದು ಬೆಳಗ್ಗೆ ಸುಮಾರು 9:30ರ ವೇಳೆಗೆ ಮನೆಯಿಂದ ಹೊರಹೋದ ಪ್ರಮೋದ ಅವರು ಈವರೆಗೂ ಮನೆಗೆ ಮರಳಿಲ್ಲ. ಕುಟುಂಬಸ್ಥರು ಹಾಗೂ ಸಂಬಂಧಿಕರು ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ.
ಈ ಕುರಿತು ಅವರ ತಾಯಿ ಸುಶೀಲಾ ದೇವಿದಾಸ ಮಡಿವಾಳ ಅವರು ಅಕ್ಟೋಬರ್ 13ರಂದು ಮುರ್ಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಾಪತ್ತೆಯಾದ ಪ್ರಮೋದ ದೇವಿದಾಸ ಮಡಿವಾಳ ಅವರಿಗೆ 38 ವರ್ಷ ವಯಸ್ಸಾಗಿದ್ದು, 5.7 ಅಡಿ ಎತ್ತರವಿದ್ದಾರೆ. ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹಾಗೂ ಉದ್ದನೆಯ ಮುಖ ಹೊಂದಿದ್ದಾರೆ. ಸ್ವಲ್ಪ ಗಡ್ಡವಿದ್ದು, ಮುಂಭಾಗದ ಹಲ್ಲು ಸ್ವಲ್ಪ ಕಟ್ಟಾಗಿರುವಂತೆ ಕಾಣುತ್ತದೆ. ಬಲಗೈಯಲ್ಲಿ ಕೆಂಪು ದಾರ ಧರಿಸಿದ್ದಾರೆ. ಕನ್ನಡ ಮತ್ತು ಕೊಂಕಣಿ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಹೋಗುವಾಗ ಬಿಳಿ ಬಣ್ಣದ ಪೂರ್ಣ ತೋಳಿನ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದರು.
ಕಾಣೆಯಾದ ಪ್ರಮೋದ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಮುರ್ಡೇಶ್ವರ ಪೊಲೀಸ್ ಠಾಣೆ 08385-268896, ಮೊಬೈಲ್ ಸಂಖ್ಯೆ 9480805253, ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ 08382-226550 ಅಥವಾ ಎಸ್‌ಪಿ ಕಚೇರಿ, ಕಾರವಾರ 08382-226233 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
