UK Express Logo
BREAKING

ಕಸದ ರಾಶಿಯಲ್ಲಿ ಸಿಕ್ಕ ಚಿನ್ನದ ಕಿವಿಯೋಲೆ ವಾರಸುದಾರರಿಗೆ ಮರಳಿಸಿದ ಕಾರವಾರ ನಗರಸಭೆ ಸಿಬ್ಬಂದಿ

By UKExpress on 11/10/2026

ಕಾರವಾರ: ಕಸದ ರಾಶಿಯಲ್ಲಿ ಬೆಲೆಬಾಳುವ ವಸ್ತುಗಳು ಸಿಗುವುದು ಅಪರೂಪವೇನಲ್ಲ. ಆದರೆ ತ್ಯಾಜ್ಯದ ನಡುವೆ ಸಿಕ್ಕ ಚಿನ್ನದ ಆಭರಣವನ್ನು ತಮ್ಮದಲ್ಲದ ಆಸ್ತಿ ಎಂದು ಪರಿಗಣಿಸಿ, ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಅದರ ವಾರಸುದಾರರನ್ನು ಹುಡುಕಿ ಮರಳಿಸಿದ ಕಾರವಾರ ನಗರಸಭೆಯ ಇಬ್ಬರು ಸಿಬ್ಬಂದಿಯ ಪ್ರಾಮಾಣಿಕ ನಡೆ ಇದೀಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ದೀಪಾವಳಿ ಹಬ್ಬದ ಪೂಜೆಯ ಬಳಿಕ ಮನೆಯ ತ್ಯಾಜ್ಯ ವಿಲೇವಾರಿ ಮಾಡುವ ಸಂದರ್ಭದಲ್ಲಿ ಕಳಸವಾಡದ ನಿವಾಸಿ ಕವಿತಾ ಗಣೇಶ್ ನಾಯ್ಕ್ ಅವರು ಕಣ್ತಪ್ಪಿನಿಂದ ತಮ್ಮ ಚಿನ್ನದ ಕಿವಿಯೋಲೆಯೊಂದನ್ನು ಕಸದ ಕವರ್‌ನೊಂದಿಗೆ ಹಾಕಿದ್ದರು. ಬಳಿಕ ಮನೆಮನೆಯಿಂದ ಸಂಗ್ರಹಿಸಿದ ತ್ಯಾಜ್ಯವನ್ನು ನಗರಸಭೆಯ ವಾಹನದಲ್ಲಿ ವಿಲೇವಾರಿ ಘಟಕಕ್ಕೆ ಸಾಗಿಸಲಾಗಿತ್ತು.

ಅಲ್ಲಿ ಕಸವನ್ನು ವಿಂಗಡಿಸುವ ಕಾರ್ಯದಲ್ಲಿ ತೊಡಗಿದ್ದ ಮನೆಮನೆ ತ್ಯಾಜ್ಯ ಸಂಗ್ರಹಣಾ ವಾಹನದ ಚಾಲಕ ಅರುಣ್ ವಿಠಲ್ ಹರಿಜನ್ ಹಾಗೂ ಸಹಾಯಕ ಮದನ್ ನಾಯ್ಕ್ ಅವರಿಗೆ ಕಸದ ರಾಶಿಯ ನಡುವೆ ಚಿನ್ನದ ಕಿವಿಯೋಲೆ ಕಾಣಿಸಿದೆ. ತಕ್ಷಣವೇ ಅದರ ಬೆಲೆಬಾಳುವಿಕೆಯನ್ನು ಗಮನಿಸಿದ ಸಿಬ್ಬಂದಿ, ಆಭರಣವನ್ನು ಸುರಕ್ಷಿತವಾಗಿ ತೆಗೆದಿಟ್ಟುಕೊಂಡಿದ್ದಾರೆ.

ಚಿನ್ನದ ಓಲೆ ಯಾರದ್ದು ಎಂಬುದನ್ನು ಪತ್ತೆಹಚ್ಚಲು ಮುಂದಾದ ಅವರು, ವಿಚಾರಣೆ ನಡೆಸಿ ವಾರಸುದಾರರ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಕಿವಿಯೋಲೆ ಕಳೆದುಕೊಂಡಿದ್ದ ಕವಿತಾ ಗಣೇಶ್ ನಾಯ್ಕ್ ಅವರನ್ನು ಸಂಪರ್ಕಿಸಿ, ಅವರ ಕೈಗೇ ಆಭರಣವನ್ನು ಸುರಕ್ಷಿತವಾಗಿ ಒಪ್ಪಿಸಿದ್ದಾರೆ.

ಕಸದೊಂದಿಗೆ ಕಳೆದುಹೋಗಿದ್ದ ಚಿನ್ನ ಮರಳಿ ಕೈ ಸೇರಿದ ಸಂತಸದಲ್ಲಿ ಕವಿತಾ ಅವರು ಸಿಬ್ಬಂದಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದಾರೆ. ಕಸದ ರಾಶಿಯಲ್ಲಿ ಯಾರ ಗಮನಕ್ಕೂ ಬಾರದೆ ಹೋಗಬಹುದಾಗಿದ್ದ ಬೆಲೆಬಾಳುವ ಆಭರಣವನ್ನು ಪ್ರಾಮಾಣಿಕತೆಯಿಂದ ವಾರಸುದಾರರಿಗೆ ತಲುಪಿಸಿದ ಅರುಣ್ ಮತ್ತು ಮದನ್ ಅವರ ಕಾರ್ಯಕ್ಕೆ ನಗರಸಭೆ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಕರ್ತವ್ಯನಿಷ್ಠೆಯ ಜೊತೆಗೆ ಪ್ರಾಮಾಣಿಕತೆಯನ್ನೂ ಮೆರೆದ ಪೌರಕಾರ್ಮಿಕರ ಈ ನಡೆ ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ.