ಉತ್ತರ ಕನ್ನಡದ 11 ಮಂದಿ ಮುಖಂಡರಿಗೆ ನಿಗಮ–ಮಂಡಳಿ ಸ್ಥಾನಮಾನ: ಶಿರಸಿಗೆ ಗರಿಷ್ಠ 4 ಸ್ಥಾನ

ಉತ್ತರ ಕನ್ನಡ: ರಾಜ್ಯ ಸರ್ಕಾರದ ವಿವಿಧ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ನೂತನ ನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದು, ಉತ್ತರ ಕನ್ನಡ ಜಿಲ್ಲೆಯ 11 ಮಂದಿ ಮುಖಂಡರಿಗೆ ವಿವಿಧ ಸಂಸ್ಥೆಗಳಲ್ಲಿ ಸ್ಥಾನಮಾನ ಲಭಿಸಿದೆ.
ಮುಖ್ಯಮಂತ್ರಿ ಅವರ ಅನುಮೋದನೆಯೊಂದಿಗೆ ನಡೆದಿರುವ ಈ ನೇಮಕಾತಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಮುಖಂಡರಿಗೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯಮಟ್ಟದ ವಿವಿಧ ನಿಗಮ, ಮಂಡಳಿ ಹಾಗೂ ಅಭಿವೃದ್ಧಿ ಪ್ರಾಧಿಕಾರಗಳಲ್ಲಿ ಜಿಲ್ಲೆಯ ಮುಖಂಡರಿಗೆ ಜವಾಬ್ದಾರಿ ನೀಡಲಾಗಿದೆ.
ತಾಲೂಕುವಾರು ಸ್ಥಾನಗಳನ್ನು ಗಮನಿಸಿದರೆ ಶಿರಸಿಗೆ 4, ದಾಂಡೇಲಿಗೆ 2 ಸ್ಥಾನಗಳು ಲಭಿಸಿದ್ದು, ಕಾರವಾರ, ಸಿದ್ದಾಪುರ, ಭಟ್ಕಳ, ಹೊನ್ನಾವರ ಹಾಗೂ ಯಲ್ಲಾಪುರ ತಾಲೂಕುಗಳಿಗೆ ತಲಾ ಒಂದು ಸ್ಥಾನ ದೊರೆತಿದೆ.
ಬನವಾಸಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಾರವಾರದ ಶೇಜ್ಜಾಡದ ಸಮೀರ್ ನೀಲಕಂಠ ನಾಯಕ್ ಹಾಗೂ ಶಿರಸಿಯ ಮಳಲಗಾಂವ್‌ನ ಸಿದ್ದನಗೌಡರ್ ನೇಮಕಗೊಂಡಿದ್ದಾರೆ.
ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಿರಸಿಯ ಪ್ರಸನ್ನ ಶ್ರೀಕಾಂತ್ ಶೆಟ್ಟಿ ಹಾಗೂ ಸಿದ್ದಾಪುರ ತಾಲೂಕಿನ ನೆಲ್ಲೂರಿನ ನಾಸಿರ್ ವಲಿ ಖಾನ್ ಅವರನ್ನು ನೇಮಕ ಮಾಡಲಾಗಿದೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ದಾಂಡೇಲಿಯ ಅನಿಲ್ ಲಕ್ಷ್ಮಣ್ ನಾಯ್ಕರ್ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) ದಾಂಡೇಲಿಯ ವೆಂಕಟ ರಮಣಮ್ಮ ಮೈತುರಿ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ಜೀವವೈವಿಧ್ಯ ಮಂಡಳಿಗೆ ಶಿರಸಿ ತಾಲೂಕಿನ ಕುಪ್ಪಗಡ್ಡೆಯ ಚಿದಾನಂದ ಫಕೀರ ನಾಯಕ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ಭಟ್ಕಳ ತಾಲೂಕಿನ ಕೊಪ್ಪದ ಹತ್ತಿಬಾಗ್ ಮಜರೆಯ ಮಾರುತಿ ಸುಕ್ರ ಗೋಂಡ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮಕ್ಕೆ ಹೊನ್ನಾವರ ತಾಲೂಕಿನ ಗುಳದಕೇರಿಯ ಗಜಾನನ ನಾಯಕ್, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಯಲ್ಲಾಪುರ ತಾಲೂಕಿನ ಅಂಗೋಡ್‌ನ ಮೆಣಸುಪಾಲ್‌ನ ನಾರಾಯಣ ಕೃಷ್ಣ ಭಟ್ ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿಗೆ ಶಿರಸಿಯ ಶಿರಸಿಮಕ್ಕಿಯ ಎಸ್.ಕೆ. ಭಾಗವತ್ ಅವರನ್ನು ನೇಮಕ ಮಾಡಲಾಗಿದೆ.
ಜಿಲ್ಲೆಯ ವಿವಿಧ ತಾಲೂಕುಗಳ ಮುಖಂಡರಿಗೆ ರಾಜ್ಯಮಟ್ಟದ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಲ್ಲಿ ಸ್ಥಾನಮಾನ ದೊರೆತಿರುವುದು ಸ್ಥಳೀಯ ಕಾಂಗ್ರೆಸ್ ವಲಯದಲ್ಲಿ ಸಂತಸ ಮೂಡಿಸಿದೆ. ನೇಮಕಗೊಂಡ ಮುಖಂಡರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮುಖಂಡರಿಗೆ ರಾಜ್ಯಮಟ್ಟದಲ್ಲಿ ಪ್ರಾತಿನಿಧ್ಯ ದೊರೆತಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
