UK Express Logo

ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿಗೆ ವಿಶೇಷ ಪೊಲೀಸ್ ಬಂದೋಬಸ್ತ್

By UKExpress on 9/14/2026

ಕಾರವಾರ: ಗಣೇಶ ಚತುರ್ಥಿ ಹಬ್ಬವನ್ನು ಶಾಂತಿಯುತ, ಸೌಹಾರ್ದಯುತ ಹಾಗೂ ಕಾನೂನು ಚೌಕಟ್ಟಿನೊಳಗೆ ಆಚರಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲಾದ್ಯಂತ ವಿಶೇಷ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.

ಈ ಬಾರಿ ಜಿಲ್ಲೆಯಾದ್ಯಂತ ಒಟ್ಟು 1,492 ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದ್ದು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು 2 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 5 ಡಿವೈಎಸ್‌ಪಿ, 22 ಪೊಲೀಸ್ ನಿರೀಕ್ಷಕರು, 72 ಪಿಎಸ್‌ಐ, 125 ಎಎಸ್‌ಐ, 1,020 ಪೊಲೀಸ್ ಕಾನ್ಸ್ಟೇಬಲ್‌ಗಳು ಹಾಗೂ 400 ಹೋಮ್‌ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ 5 ಕೆಎಸ್‌ಆರ್‌ಪಿ ಮತ್ತು 15 ಡಿಎಆರ್ ತುಕಡಿಗಳನ್ನು ಸಹ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ತುರ್ತು ಸಂದರ್ಭಗಳಲ್ಲಿ ಅಗತ್ಯ ನೆರವು ಒದಗಿಸಲು ಅಗ್ನಿಶಾಮಕ ದಳ, ಕರಾವಳಿ ಕಾವಲು ಪಡೆ ಹಾಗೂ ಆಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗಿದೆ.

ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಧಾರ್ಮಿಕ ಮುಖಂಡರು ಹಾಗೂ ಗಣೇಶೋತ್ಸವ ಆಯೋಜಕರೊಂದಿಗೆ ಶಾಂತಿ ಸಭೆ ನಡೆಸಲಾಗಿದೆ. ಇದೇ ರೀತಿ ಪೊಲೀಸ್ ಉಪವಿಭಾಗ ಮಟ್ಟದಲ್ಲಿ 4, ಪೊಲೀಸ್ ಠಾಣಾ ಮಟ್ಟದಲ್ಲಿ 26 ಹಾಗೂ ಬೀಟ್ ಮಟ್ಟದಲ್ಲಿ 392 ಶಾಂತಿ ಸಭೆಗಳನ್ನು ನಡೆಸಿ, ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಕುರಿತು ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಡಿಜೆ ಹಾಗೂ ಸೌಂಡ್ ಸಿಸ್ಟಂ ಮಾಲೀಕರೊಂದಿಗೆ 12 ಸಭೆಗಳನ್ನು ನಡೆಸಿ ಸುಪ್ರೀಂ ಕೋರ್ಟ್ ಹಾಗೂ ಸರ್ಕಾರದ ನಿಯಮಗಳ ಕುರಿತು ಮಾಹಿತಿ ನೀಡಲಾಗಿದೆ.

ಗಣೇಶ ಮೂರ್ತಿ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಪೊಲೀಸ್ ಶ್ವಾನದಳ ಹಾಗೂ ಎಎಸ್‌ಸಿ ತಂಡಗಳಿಂದ ತಪಾಸಣೆ ನಡೆಸಲಾಗುವುದು. ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಆಯೋಜಕರಿಗೆ ಸೂಚಿಸಲಾಗಿದೆ. 24 ಗಂಟೆಯೂ ಕನಿಷ್ಠ ಒಬ್ಬ ಜವಾಬ್ದಾರಿಯುತ ಆಯೋಜಕರು ಸ್ಥಳದಲ್ಲಿರುವಂತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರನ್ನು ನಿಯೋಜಿಸುವಂತೆ ಸೂಚಿಸಲಾಗಿದೆ.

ಗಣೇಶ ಮೂರ್ತಿ ವಿಸರ್ಜನಾ ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಪರಿಣಿತ ಈಜುಗಾರರನ್ನು ನಿಯೋಜಿಸುವಂತೆಯೂ ಆಯೋಜಕರಿಗೆ ಸೂಚಿಸಲಾಗಿದೆ.

ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವಂತಹ ತಪ್ಪು ಅಥವಾ ಸುಳ್ಳು ಸುದ್ದಿಗಳನ್ನು ಹರಡುವವರ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.

ಸಾರ್ವಜನಿಕರು ಹಾಗೂ ಗಣೇಶೋತ್ಸವ ಆಯೋಜಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ, ಸರ್ಕಾರದ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಿ ಗಣೇಶ ಚತುರ್ಥಿ ಹಬ್ಬವನ್ನು ಸುರಕ್ಷಿತವಾಗಿ ಹಾಗೂ ಸಂಭ್ರಮದಿಂದ ಆಚರಿಸುವಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.