UK Express Logo

ಕೈಗಾ 5, 6ನೇ ಘಟಕ ಕಾಮಗಾರಿ: ಸ್ಥಳೀಯರ ಬೇಡಿಕೆ ಈಡೇರಿಸಲು ಸೆ.16ರಂದು ಪ್ರತಿಭಟನೆ

By UKExpress on 9/14/2026

ಕಾರವಾರ: ಕೈಗಾ ಪರಮಾಣು ವಿದ್ಯುತ್ ಸ್ಥಾವರದ 5ನೇ ಮತ್ತು 6ನೇ ಘಟಕಗಳ ವಿಸ್ತರಣಾ ಕಾಮಗಾರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಲಾರಿ ವಾಹನಗಳು ಹಾಗೂ ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಲಾರಿ ಟ್ರಾನ್ಸ್‌ಪೋರ್ಟ್ ಡೆವಲಪ್‌ಮೆಂಟ್ ವೆಲ್ಫೇರ್ ಅಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಸೆಪ್ಟೆಂಬರ್ 16ರಂದು ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿದೆ.

ಈ ಕುರಿತು ಸಂಘಟನೆಯ ಅಧ್ಯಕ್ಷ ವಿಶ್ವಜಿತ್ ಕೆ. ನಾಯಕ ಅವರು ಸೆಪ್ಟೆಂಬರ್ 11ರಂದು ಪ್ರತಿಭಟನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ಕಾರವಾರ ತಹಶೀಲ್ದಾರ್ ಅವರು ಅರ್ಜಿಯನ್ನು ಕದ್ರಾ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ ರವಾನಿಸಿದ್ದಾರೆ.

ಕೈಗಾ 5ನೇ ಮತ್ತು 6ನೇ ಘಟಕಗಳ ಬೃಹತ್ ನಿರ್ಮಾಣ ಕಾಮಗಾರಿಗೆ ಅಗತ್ಯವಿರುವ ಜೆಲ್ಲಿ, ಕಚ್ಚಾ ವಸ್ತು ಹಾಗೂ ಸಾರಿಗೆ ಲಾರಿಗಳನ್ನು ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಂದ ತರಿಸಿಕೊಳ್ಳಲಾಗುತ್ತಿದೆ. ಇದರಿಂದ ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಲಾರಿ ಮಾಲೀಕರು, ಚಾಲಕರು ಹಾಗೂ ಸಾರಿಗೆ ಉದ್ಯಮಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಸಂಘಟನೆ ಆರೋಪಿಸಿದೆ.

ಕೈಗಾ ಯೋಜನೆಗಾಗಿ ಜಿಲ್ಲೆಯ ಜನರು ಭೂಮಿ ಹಾಗೂ ಪರಿಸರವನ್ನು ತ್ಯಾಗ ಮಾಡಿದ್ದು, ಸರ್ಕಾರದ ನಿಯಮಾವಳಿಗಳಂತೆ ಯೋಜನೆಯಲ್ಲಿ ಸ್ಥಳೀಯ ಸಂಪನ್ಮೂಲ ಮತ್ತು ಸೇವೆಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಸಂಘಟನೆಯ ಪ್ರಮುಖ ಬೇಡಿಕೆಗಳಲ್ಲಿ ಸ್ಥಳೀಯರಿಗೆ ಶೇ.80ರಷ್ಟು ಸಾರಿಗೆ ಹಾಗೂ ಕಚ್ಚಾ ವಸ್ತು ಪೂರೈಕೆಯ ಅವಕಾಶ ಕಲ್ಪಿಸುವುದು, ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವುದು ಹಾಗೂ ಲಾರಿ ಸಾಗಣೆಗೆ ಸೂಕ್ತ ಮತ್ತು ನ್ಯಾಯಯುತ ದರ ನಿಗದಿಪಡಿಸುವುದು ಸೇರಿವೆ.

ಈ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಿಂದ ಈ ಹಿಂದೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ NPCILಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಜೂನ್ 24ರಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಕೈಗಾ 5ನೇ ಮತ್ತು 6ನೇ ಘಟಕಗಳ ಕಾಮಗಾರಿಯಲ್ಲಿ ಸ್ಥಳೀಯ ಲಾರಿ ವಾಹನಗಳಿಗೆ ಹಾಗೂ ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ರವಾನಿಸಲಾಗಿತ್ತು.

ನಂತರ ಆಗಸ್ಟ್ 21ರಂದು ಕೂಡ ಈ ಕುರಿತು ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿತ್ತು. ಆದರೆ, ಇದುವರೆಗೆ ತಮ್ಮ ಬೇಡಿಕೆಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.

ಜಿಲ್ಲಾಧಿಕಾರಿಗಳ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಸ್ಥಳೀಯರಿಗೆ ಶೇ.80ರಷ್ಟು ಅವಕಾಶ ಕಲ್ಪಿಸಬೇಕು ಮತ್ತು ಸೂಕ್ತ ಸಾಗಾಣಿಕೆ ದರ ನಿಗದಿಪಡಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಬೇಡಿಕೆಗಳು ಈಡೇರುವವರೆಗೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಸಿದ್ಧವಿರುವುದಾಗಿ ಸಂಘಟನೆ ತಿಳಿಸಿದ್ದು, ಸ್ಥಳೀಯರ ಹಕ್ಕು ಹಾಗೂ ಉದ್ಯೋಗದ ಅವಕಾಶಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.