
ಕಾರವಾರ: ರೇಷನ್ ಕಾರ್ಡ್‌ಗಳ ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯಗೊಳಿಸಿರುವ ಬೆನ್ನಲ್ಲೇ ಸರ್ವರ್ ಸಮಸ್ಯೆ ಸಾರ್ವಜನಿಕರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಇ-ಕೆವೈಸಿ ಮಾಡಿಸಿಕೊಳ್ಳಲು ನ್ಯಾಯಬೆಲೆ ಅಂಗಡಿಗಳ ಮುಂದೆ ಬೆಳಗ್ಗೆಯಿಂದಲೇ ಉದ್ದನೆಯ ಸರತಿ ಸಾಲು ಕಂಡುಬರುತ್ತಿದ್ದು, ಕೆಲವರು ದಿನವಿಡೀ ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರಾಜ್ಯದ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಪಡಿತರ ಚೀಟಿಗೆ ಆಧಾರ್ ಜೋಡಣೆ ಮಾಡಿ, ಬಯೋಮೆಟ್ರಿಕ್ ಮೂಲಕ ಅರ್ಹ ಫಲಾನುಭವಿಗಳನ್ನು ದೃಢೀಕರಿಸುವುದು ಇದರ ಉದ್ದೇಶವಾಗಿದೆ. ಆದರೆ, ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಏಕಕಾಲದಲ್ಲಿ ಕೆವೈಸಿ ಮಾಡಿಸಿಕೊಳ್ಳಲು ಮುಂದಾಗಿರುವುದರಿಂದ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸರ್ವರ್ ನಿಧಾನಗತಿಯಿಂದಾಗಿ ಒಬ್ಬ ಸದಸ್ಯರ ಇ-ಕೆವೈಸಿ ಪೂರ್ಣಗೊಳಿಸಲು 15ರಿಂದ 20 ನಿಮಿಷ ಅಥವಾ ಕೆಲವೆಡೆ ಅದಕ್ಕಿಂತಲೂ ಹೆಚ್ಚು ಸಮಯ ಬೇಕಾಗುತ್ತಿದೆ. ಇದರಿಂದ ಒಂದು ದಿನದಲ್ಲಿ ಸೀಮಿತ ಸಂಖ್ಯೆಯ ಪಡಿತರದಾರರ ಕೆವೈಸಿ ಮಾತ್ರ ಪೂರ್ಣಗೊಳಿಸಲು ಸಾಧ್ಯವಾಗುತ್ತಿದೆ. ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾಯುತ್ತಿದ್ದರೂ ತಮ್ಮ ಸರದಿ ಬರುವಷ್ಟರಲ್ಲಿ ಸಮಯ ಮುಗಿಯುವ ಸ್ಥಿತಿಯೂ ಕೆಲವೆಡೆ ಕಂಡುಬರುತ್ತಿದೆ.
ಈಗಾಗಲೇ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರ ಪಡೆಯುವ ಸಂದರ್ಭದಲ್ಲಿ ಬಯೋಮೆಟ್ರಿಕ್ ನೀಡಿರುವ ಫಲಾನುಭವಿಗಳು, ಕುಟುಂಬದ ಸದಸ್ಯರ ಇ-ಕೆವೈಸಿಗಾಗಿ ಮತ್ತೊಮ್ಮೆ ನ್ಯಾಯಬೆಲೆ ಅಂಗಡಿಗಳಿಗೆ ತೆರಳಬೇಕಾಗಿದೆ. ಒಂದೆಡೆ ಮಾಸಿಕ ಪಡಿತರ ವಿತರಣೆ, ಮತ್ತೊಂದೆಡೆ ಇ-ಕೆವೈಸಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿನ ಕೆಲಸದ ಒತ್ತಡವೂ ಹೆಚ್ಚಾಗಿದೆ.
ಸರ್ವರ್ ಸಮಸ್ಯೆಯಿಂದ ಕೂಲಿ ಕಾರ್ಮಿಕರು ದಿನಗೂಲಿ ಕೆಲಸಕ್ಕೆ ತೆರಳಲು ಸಾಧ್ಯವಾಗದೆ, ವಿದ್ಯಾರ್ಥಿಗಳು ತರಗತಿಗಳಿಗೆ ಗೈರಾಗಿಯೂ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ವಯೋವೃದ್ಧರು ದೀರ್ಘಕಾಲ ಕ್ಯೂನಲ್ಲಿ ನಿಲ್ಲುವುದು ಕಷ್ಟವಾಗಿದ್ದು, ಕೆಲವರ ಬೆರಳಚ್ಚು ಸರಿಯಾಗಿ ಸ್ಕ್ಯಾನ್ ಆಗದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಇ-ಕೆವೈಸಿ ಕಡ್ಡಾಯಗೊಳಿಸಿರುವುದಕ್ಕೆ ಸಾರ್ವಜನಿಕರ ವಿರೋಧವಿಲ್ಲ. ಆದರೆ, ಅಗತ್ಯ ಸರ್ವರ್ ಸಾಮರ್ಥ್ಯ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಗಡುವು ನಿಗದಿಪಡಿಸಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸರ್ಕಾರಿ ವ್ಯವಸ್ಥೆಯ ತಾಂತ್ರಿಕ ಸಮಸ್ಯೆಗೆ ಬಡ ಹಾಗೂ ಮಧ್ಯಮ ವರ್ಗದ ಪಡಿತರದಾರರು ದಿನಗೂಲಿ ಕಳೆದುಕೊಂಡು ಬೆಲೆ ತೆರಬೇಕೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಪ್ರಸ್ತುತ ಸರ್ವರ್ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವವರೆಗೆ ಇ-ಕೆವೈಸಿಗೆ ನೀಡಿರುವ ಸೆಪ್ಟೆಂಬರ್ 30ರ ಗಡುವನ್ನು ವಿಸ್ತರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇ-ಕೆವೈಸಿ ಪ್ರಕ್ರಿಯೆಯನ್ನು ಕೇವಲ ನ್ಯಾಯಬೆಲೆ ಅಂಗಡಿಗಳಿಗೆ ಸೀಮಿತಗೊಳಿಸದೆ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಸೈಬರ್ ಸೆಂಟರ್‌ಗಳಿಗೂ ವಿಸ್ತರಿಸಬೇಕು. ಕೆವೈಸಿ ಪೂರ್ಣಗೊಳಿಸಲು ಕನಿಷ್ಠ ಎರಡು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಬೇಕು. ತಾಂತ್ರಿಕ ಸಮಸ್ಯೆಯಿಂದಾಗಿ ಕೆವೈಸಿ ಪೂರ್ಣಗೊಳ್ಳದ ಅರ್ಹ ಫಲಾನುಭವಿಗಳ ಪಡಿತರವನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು ಎಂದು ಒತ್ತಾಯಿಸಲಾಗಿದೆ.
ಡಿಜಿಟಲ್ ವ್ಯವಸ್ಥೆ ಜನರ ಜೀವನವನ್ನು ಸುಲಭಗೊಳಿಸುವ ಉದ್ದೇಶ ಹೊಂದಿರಬೇಕು. ಆದರೆ ತಾಂತ್ರಿಕ ಅಸಮರ್ಪಕತೆ ಹಾಗೂ ಪರ್ಯಾಯ ವ್ಯವಸ್ಥೆಯ ಕೊರತೆಯಿಂದಾಗಿ ಬಡವರು, ಕೂಲಿ ಕಾರ್ಮಿಕರು ಮತ್ತು ವಯೋವೃದ್ಧರು ದಿನಗಟ್ಟಲೆ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾಯುವಂತಾಗಿರುವುದು ವಿಷಾದನೀಯ. ಸರ್ಕಾರ ತಕ್ಷಣ ಸರ್ವರ್ ಸಾಮರ್ಥ್ಯ ಹೆಚ್ಚಿಸಿ, ಮೊಬೈಲ್ ಆಧಾರಿತ ಫೇಸ್ ಕೆವೈಸಿಗೆ ಅವಕಾಶ ಕಲ್ಪಿಸುವ ಮೂಲಕ ಪಡಿತರದಾರರ ಸಂಕಷ್ಟಕ್ಕೆ ಪರಿಹಾರ ನೀಡಬೇಕಾಗಿದೆ.
