
ಭಟ್ಕಳ: ಭಟ್ಕಳ ಉಪವಿಭಾಗದ ನೂತನ ಎಎಸ್‌ಪಿ ರಾನು ಗುಪ್ತ, ಐಪಿಎಸ್ ಅವರು ಅಧಿಕಾರ ವಹಿಸಿಕೊಂಡ ಕೇವಲ 24 ಗಂಟೆಯಲ್ಲೇ ಅಕ್ರಮ ಮರಳು ಸಾಗಾಟದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಸೆ.1ರ ರಾತ್ರಿ 11ರಿಂದ ಸೆ.2ರ ಬೆಳಗಿನ ಜಾವ 3ರವರೆಗೆ ನಡೆದ ಕಾರ್ಯಾಚರಣೆಯಲ್ಲಿ ಮಂಕಿ ಹಾಗೂ ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಬಳಸುತ್ತಿದ್ದ 6 ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಭಟ್ಕಳ ಹಾಗೂ ಹೊನ್ನಾವರ ತಹಶೀಲ್ದಾರ್‌ಗಳ ಸಹಕಾರ ಪಡೆಯಲಾಗಿದ್ದು, ವಶಪಡಿಸಿಕೊಂಡ ಪ್ರತಿಯೊಂದು ಟಿಪ್ಪರ್‌ಗೆ ₹24,000 ದಂಡ ವಿಧಿಸಲಾಗಿದೆ ಎನ್ನಲಾಗಿದೆ.
ಮಂಕಿ ಠಾಣಾ ವ್ಯಾಪ್ತಿಯಲ್ಲಿ ಮೂರು ಹಾಗೂ ಮುರುಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಮೂರು ಟಿಪ್ಪರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಎರಡೂ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಎಎಸ್‌ಪಿ ರಾನು ಗುಪ್ತ ಅವರ ನೇತೃತ್ವದಲ್ಲಿ ನಡೆದ ಮೊದಲ ಪ್ರಮುಖ ಕಾರ್ಯಾಚರಣೆಯಲ್ಲೇ ಆರು ಟಿಪ್ಪರ್‌ಗಳು ವಶವಾಗಿರುವುದು ಅಕ್ರಮ ಮರಳು ಸಾಗಾಟಗಾರರಿಗೆ ಎಚ್ಚರಿಕೆಯ ಸಂದೇಶ ನೀಡಿದೆ. ಮುಂದಿನ ದಿನಗಳಲ್ಲೂ ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕಾರ್ಯಾಚರಣೆ ಮುಂದುವರಿಯುವ ನಿರೀಕ್ಷೆಯಿದೆ.
