UK Express Logo

ಗೋಕರ್ಣದಲ್ಲಿ ಭಕ್ತರ ಸೋಗಿನಲ್ಲಿ ಪರ್ಸ್ ಕಳವು; ಗದಗ ಮೂಲದ ನಾಲ್ವರು ಮಹಿಳೆಯರ ಬಂಧನ

By UKExpress on 9/9/2026

ಗೋಕರ್ಣ: ಪ್ರಸಿದ್ಧ ಯಾತ್ರಾ ಸ್ಥಳವಾದ ಗೋಕರ್ಣದ ಮಹಾಗಣಪತಿ ದೇವಸ್ಥಾನಕ್ಕೆ ಭಕ್ತರ ಸೋಗಿನಲ್ಲಿ ಬಂದು ಪರ್ಸ್ ಕಳವು ಮಾಡಿದ್ದ ಆರೋಪದ ಮೇಲೆ ಗದಗ ಮೂಲದ ನಾಲ್ವರು ಮಹಿಳೆಯರನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಮುಂಜಾನೆ ದೇವರ ದರ್ಶನಕ್ಕೆ ಆಗಮಿಸಿದ್ದ ಬೆಂಗಳೂರಿನ ವಕೀಲೆ ಮಂಜುಳಾ ರಾವ್ ಸಾಹೇಬ್ ಶಿಂಧೆ ಅವರ ಪರ್ಸ್‌ ಅನ್ನು ಮಹಿಳೆಯರ ತಂಡ ಕಳವು ಮಾಡಿತ್ತು. ಈ ಕುರಿತು ಅವರು ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿ, ದೇವಸ್ಥಾನ ಹಾಗೂ ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಕೃತ್ಯ ನಡೆದ 24 ಗಂಟೆಗಳೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಗದಗ ಜಿಲ್ಲೆಯ ಬೆಟಗೇರಿ ಗಾಂಧಿನಗರ ನಿವಾಸಿಗಳಾದ ಭೀಮವ್ವ ಹನುಮಂತಪ್ಪ ಮುತಗಾರ, ಶಾಂತಾ ರಾಮಪ್ಪ ಮುತಗಾರ, ಶೋಭಾ ರಾಮಪ್ಪ ಮುತಗಾರ ಹಾಗೂ ಕುಮಾರಿ ಮಾರುತಿ ಮುತಗಾರ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎಂದು ತಿಳಿದುಬಂದಿದೆ.

ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳು ರಾಜ್ಯದ ವಿವಿಧ ಪ್ರಸಿದ್ಧ ದೇವಾಲಯಗಳು ಹಾಗೂ ಹೊರರಾಜ್ಯದ ಧಾರ್ಮಿಕ ಸ್ಥಳಗಳಿಗೆ ಭಕ್ತರ ಸೋಗಿನಲ್ಲಿ ತೆರಳಿ ಪಿಕ್‌ಪಾಕೆಟ್ ಹಾಗೂ ಕಳವು ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

ಗೋಕರ್ಣ ಠಾಣೆಯ ಸಿ.ಪಿ.ಐ ಶ್ರೀಧರ ಎಸ್.ಆರ್. ಮಾರ್ಗದರ್ಶನದಲ್ಲಿ ಕ್ರೈಂ ಪಿಎಸ್‌ಐ ಸುನಿಲ್ ಅವರ ನೇತೃತ್ವದ ಪೊಲೀಸ್ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಪೊಲೀಸರ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರು ಹಾಗೂ ಯಾತ್ರಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.