UK Express Logo

‘ಗೋಕರ್ಣದ ಸ್ವಚ್ಛತೆ ಎಲ್ಲರ ಹೊಣೆ’ — ಶಾಸಕ ದಿನಕರ ಶೆಟ್ಟಿ

By UKExpress on 9/9/2026

ಗೋಕರ್ಣ: ಧಾರ್ಮಿಕ ಹಾಗೂ ಪ್ರವಾಸಿ ಕ್ಷೇತ್ರವಾಗಿರುವ ಗೋಕರ್ಣದ ಸ್ವಚ್ಛತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಹೋಟೆಲ್, ರೆಸಾರ್ಟ್‌ಗಳು ಸೇರಿದಂತೆ ಸಾರ್ವಜನಿಕರು ಕಸ ವಿಲೇವಾರಿ ಹಾಗೂ ಸ್ವಚ್ಛತಾ ಕಾರ್ಯಗಳಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಗೋಕರ್ಣ ಗ್ರಾಮ ಪಂಚಾಯಿತಿಯಲ್ಲಿ ₹12.5 ಲಕ್ಷ ವೆಚ್ಚದಲ್ಲಿ ಖರೀದಿಸಲಾದ ನೂತನ ಕಸ ಸಂಗ್ರಹಣ ವಾಹನವನ್ನು ಬುಧವಾರ ಲೋಕಾರ್ಪಣೆಗೊಳಿಸಿ, ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಗೋಕರ್ಣ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸುವ ಕುರಿತು ಸತತ ಪ್ರಯತ್ನ ನಡೆಸಲಾಗುತ್ತಿದೆ. ಪಟ್ಟಣ ಪಂಚಾಯಿತಿಯ ಬದಲು ಗೋಕರ್ಣವನ್ನು ಪುರಸಭೆಯನ್ನಾಗಿ ಮಾಡಬೇಕು ಎಂಬುದು ನಮ್ಮ ನಿಲುವಾಗಿದೆ. ಪುರಸಭೆ ಸ್ಥಾನಮಾನ ದೊರೆತರೆ ಹೆಚ್ಚಿನ ಅನುದಾನ ಲಭ್ಯವಾಗಲಿದ್ದು, ಕ್ಷೇತ್ರದ ಅಭಿವೃದ್ಧಿ ಹಾಗೂ ಸ್ವಚ್ಛತಾ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಹೇಳಿದರು.

ನಿತ್ಯ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡುವ ಗೋಕರ್ಣದಲ್ಲಿ ಸ್ವಚ್ಛತೆ ಪ್ರಮುಖ ಸವಾಲಾಗಿದೆ. ಕಸ ವಿಲೇವಾರಿ ವಿಚಾರದಲ್ಲಿ ಸ್ಥಳೀಯ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಿಂದ ನಿರೀಕ್ಷಿತ ಸಹಕಾರ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಅಧಿಕಾರಿಗಳು ತಮ್ಮ ಕಚೇರಿ ಹಾಗೂ ಸುತ್ತಮುತ್ತಲಿನ ಪರಿಸರವೂ ಸದಾ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಕಸ ವಿಲೇವಾರಿ ವ್ಯವಸ್ಥೆಯ ಮೇಲೆ ಸಮರ್ಪಕ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗೋಕರ್ಣದ ಸ್ವಚ್ಛತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಿಎಸ್‌ಆರ್‌ ನಿಧಿಯಡಿ ₹20 ಲಕ್ಷ ವೆಚ್ಚದಲ್ಲಿ ಮತ್ತೊಂದು ಕಸದ ಸಂಗ್ರಹಣ ವಾಹನ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಯೋಜನೆ ರೂಪಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಆದರೆ ಇದುವರೆಗೆ ಸರ್ಕಾರದಿಂದ ಮಂಜೂರಾತಿ ದೊರೆತಿಲ್ಲ. ಶೀಘ್ರವಾಗಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

ಪೂಜೆ ನೆರವೇರಿಸಿ ನೂತನ ಕಸ ಸಂಗ್ರಹಣ ವಾಹನವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಶಾಸಕ ದಿನಕರ ಶೆಟ್ಟಿ ಅವರು ಸ್ವತಃ ವಾಹನವನ್ನು ಸ್ವಲ್ಪ ದೂರ ಚಲಾಯಿಸುವ ಮೂಲಕ ಗಮನ ಸೆಳೆದರು.

‘ನಾನು ಎಲ್ಲೇ ಹೋದರೂ ನನ್ನ ಕ್ಷೇತ್ರ ಯಾವುದು ಎಂದು ಕೇಳಿದರೆ ಗೋಕರ್ಣ ಎನ್ನುತ್ತೇನೆ. ಈ ಪವಿತ್ರ ಕ್ಷೇತ್ರದ ಹೆಸರನ್ನು ಜಗತ್ತು ಗುರುತಿಸುತ್ತದೆ. ಆದರೆ ಇಲ್ಲಿನ ಅಭಿವೃದ್ಧಿಗೆ ಅಗತ್ಯ ಪ್ರಮಾಣದ ಅನುದಾನ ದೊರೆಯದಿರುವುದು ಬೇಸರದ ಸಂಗತಿ. ಗೋಕರ್ಣಕ್ಕೆ ಹೆಚ್ಚಿನ ಅನುದಾನ ನೀಡುವಂತೆ ವಿಧಾನಸಭೆಯಲ್ಲಿ ನಿರಂತರವಾಗಿ ಒತ್ತಾಯಿಸುತ್ತಿದ್ದೇನೆ’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಗೋಕರ್ಣ ಮಂಡಲ ಅಧ್ಯಕ್ಷ ಗಣೇಶ ಪಂಡಿತ್, ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜುನಾಥ ಜನ್ನು, ಹನೇಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸಣ್ಣು ಗೌಡ, ತಾ.ಪಂ. ಮಾಜಿ ಸದಸ್ಯ ಮಹೇಶ ಶೆಟ್ಟಿ, ಮಾಜಿ ಗ್ರಾ.ಪಂ. ಸದಸ್ಯರಾದ ರಮೇಶ ಪ್ರಸಾದ, ಮಂಜುನಾಥ ಶೆಟ್ಟಿ, ಗಣಪತಿ ನಾಯ್ಕ, ರಾಜೇಶ ನಾಯಕ, ಮಹೇಶ ನಾಯಕ, ಸುಜಯ ಶೆಟ್ಟಿ ಸೇರಿದಂತೆ ಪಕ್ಷದ ಮುಖಂಡರು, ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.