UK Express Logo

ಪರಿಸರ ಸ್ನೇಹಿಯಾಗಿ ಗೌರಿ-ಗಣೇಶ ಹಬ್ಬ ಆಚರಿಸಿ: ಮಾಲಿನ್ಯ ನಿಯಂತ್ರಣ ಮಂಡಳಿ

By UKExpress on 9/9/2026

ಕಾರವಾರ: ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಾರ್ವಜನಿಕರಿಗೆ ಮನವಿ ಮಾಡಿದೆ.

ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ), ರಾಸಾಯನಿಕ ಹಾಗೂ ಭಾರ ಲೋಹ ಮಿಶ್ರಿತ ಬಣ್ಣಗಳನ್ನು ಬಳಸುವುದರಿಂದ ಕೆರೆ, ಬಾವಿ, ನದಿ ಸೇರಿದಂತೆ ಜಲಮೂಲಗಳು ಮಾಲಿನ್ಯಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಿಒಪಿ ಹಾಗೂ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಯಾವುದೇ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ.

ಸಾರ್ವಜನಿಕರು ಬಣ್ಣರಹಿತ ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸಬೇಕು. ಮೂರ್ತಿಗಳನ್ನು ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿರುವ ಸ್ಥಳಗಳಲ್ಲಿಯೇ ವಿಸರ್ಜಿಸಬೇಕು. ವಿಸರ್ಜನೆ ಸಂದರ್ಭದಲ್ಲಿ ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ ಸೇರಿದಂತೆ ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಬೇಕು.

ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸಮಿತಿಗಳು ಸ್ಥಳೀಯ ಸಂಸ್ಥೆ ಹಾಗೂ ಪೊಲೀಸ್ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಧ್ವನಿವರ್ಧಕ ಬಳಕೆಗೆ ಸಹ ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕು. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಬಳಕೆ ನಿಷೇಧಿಸಲಾಗಿದೆ.

ಹಬ್ಬದ ಸಂದರ್ಭದಲ್ಲಿ ಥರ್ಮೊಕೋಲ್, ಪ್ಲಾಸ್ಟಿಕ್ ಫ್ಲೆಕ್ಸ್, ಏಕಬಳಕೆಯ ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳು ಹಾಗೂ ಪ್ಲಾಸ್ಟಿಕ್ ಪ್ಲೇಟ್, ಕಪ್, ಸ್ಪೂನ್, ಚಮಚ, ಫೋರ್ಕ್, ಸ್ಟ್ರಾ ಮತ್ತಿತರ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು. ಗಣೇಶ ಪೆಂಡಾಲ್‌ಗಳಲ್ಲಿ ಪ್ಲಾಸ್ಟಿಕ್ ಸ್ಟಿಕ್‌ಗಳಿರುವ ಬಲೂನ್‌ಗಳು, ಪ್ಲಾಸ್ಟಿಕ್ ಕ್ಯಾಂಡಿ ಹಾಗೂ ಐಸ್‌ಕ್ರೀಮ್ ಸ್ಟಿಕ್‌ಗಳು ಮತ್ತು ಥರ್ಮೊಕೋಲ್ ಅಲಂಕಾರಗಳನ್ನು ಬಳಸದಂತೆ ಸೂಚಿಸಲಾಗಿದೆ.

ಪಟಾಕಿ ಮಾರಾಟಗಾರರು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ಹಸಿರು ಪಟಾಕಿಗಳ ಮೇಲೆ CSIR ಹಾಗೂ NEERI ಚಿಹ್ನೆ ಮತ್ತು ಕ್ಯೂಆರ್ ಕೋಡ್ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.

ಮೂರ್ತಿ ತಯಾರಕರು ಪಿಒಪಿ ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸದೆ, ನೈಸರ್ಗಿಕ ಬಣ್ಣಗಳಿಂದ ಮಾತ್ರ ಮೂರ್ತಿಗಳನ್ನು ತಯಾರಿಸಬೇಕು. ಪಿಒಪಿ ಹಾಗೂ ರಾಸಾಯನಿಕ ಗುಣವುಳ್ಳ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಹಾಗೂ ವಿಸರ್ಜನೆಯನ್ನು ನಿಷೇಧಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಗೆ ಹೊರ ರಾಜ್ಯಗಳು ಅಥವಾ ಬೇರೆ ಜಿಲ್ಲೆಗಳಿಂದ ಪಿಒಪಿ ಗಣೇಶ ಮೂರ್ತಿಗಳು ಬಾರದಂತೆ ಹಾಗೂ ಜಿಲ್ಲೆಯಲ್ಲಿ ಇಂತಹ ಮೂರ್ತಿಗಳ ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟ ನಡೆಯದಂತೆ ಸ್ಥಳೀಯ ಸಂಸ್ಥೆಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ನಾಗರಿಕರು ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ ಆಚರಣೆಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.