
ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಭಟ್ಕಳ ಹಾಗೂ ಜೋಯಿಡಾ ತಾಲೂಕುಗಳಿಗೆ ಖಾಲಿ ಇದ್ದ ತಹಶೀಲ್ದಾರ್ ಹುದ್ದೆಗಳಿಗೆ ನೂತನ ತಹಶೀಲ್ದಾರ್‌ಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಂದಾಯ ಇಲಾಖೆಯ ತಹಶೀಲ್ದಾರ್ ಗ್ರೇಡ್-1 ವೃಂದದ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಿ ನವೆಂಬರ್ 9ರಂದು ಅಧಿಸೂಚನೆ ಹೊರಡಿಸಲಾಗಿದೆ.
ಬೈಂದೂರು ತಾಲೂಕಿನಲ್ಲಿ ತಹಶೀಲ್ದಾರ್ ಆಗಿದ್ದ ರವಿರಾಜ ದೀಕ್ಷಿತ್ ಅವರನ್ನು ಅಂಕೋಲಾ ತಾಲೂಕಿಗೆ, ಬೈಂದೂರು ತಾಲೂಕು ಕಚೇರಿಯ ತಹಶೀಲ್ದಾರ್ ಆಗಿದ್ದ ರಾಮಚಂದ್ರಪ್ಪ ಅವರನ್ನು ಭಟ್ಕಳ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ. ಅದೇ ರೀತಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶ ಎಂ. ಕಲ್ಲೊಳ್ಳಿ ಅವರನ್ನು ಜೋಯಿಡಾ ತಾಲೂಕಿಗೆ ನೇಮಕ ಮಾಡಲಾಗಿದೆ.
ಮೂರು ತಾಲೂಕುಗಳಲ್ಲಿನ ಖಾಲಿ ಹುದ್ದೆಗಳಿಗೆ ಈ ನೇಮಕಾತಿ ಮಾಡಲಾಗಿದ್ದು, ವರ್ಗಾವಣೆ ಆದೇಶ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
