ಆಂಧ್ರಪ್ರದೇಶದ ಕತ್ತಲೆಗೆ ಬೆಳಕಾದ ದಾಂಡೇಲಿಯ ಹೆಸ್ಕಾಂ ಸಿಬ್ಬಂದಿ; 8 ದಿನಗಳ ಸೇವೆಗೆ ಮೆಚ್ಚುಗೆ

ದಾಂಡೇಲಿ: ಆಂಧ್ರಪ್ರದೇಶದಲ್ಲಿ ಅರ್ನಾಬ್ ಮತ್ತು ಮುರಸು ಚಂಡಮಾರುತಗಳಿಂದ ಉಂಟಾದ ಭಾರೀ ಮಳೆ ಹಾಗೂ ಪ್ರವಾಹದಿಂದ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದ ಸಂದರ್ಭದಲ್ಲಿ, ಕರ್ನಾಟಕದ ಹೆಸ್ಕಾಂ ಸಿಬ್ಬಂದಿಗಳು ನೆರವಿನ ಹಸ್ತ ಚಾಚಿ ಮಾನವೀಯ ಸೇವೆಗೆ ಮಾದರಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ದಾಂಡೇಲಿಯ ಹೆಸ್ಕಾಂ ಸಿಬ್ಬಂದಿಗಳಾದ ಬಾಳೇಶ್ ರುದ್ರಾಪುರ ಹಾಗೂ ರೇವಣಸಿದ್ದಪ್ಪ ಡಂಬಳ ಅವರು ಸತತ ಎಂಟು ದಿನಗಳ ಕಾಲ ಹಗಲಿರುಳು ಶ್ರಮಿಸಿ ವಿದ್ಯುತ್ ಸಂಪರ್ಕ ಮರುಸ್ಥಾಪನೆ ಕಾರ್ಯದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.
ಚಂಡಮಾರುತದ ಭೀಕರತೆಗೆ ಸಾವಿರಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ತಂತಿಗಳು ತುಂಡಾಗಿ ಹಲವು ಗ್ರಾಮಗಳು ಕತ್ತಲಿನಲ್ಲಿ ಮುಳುಗಿದ್ದವು. ಸುಮಾರು 30 ಸಾವಿರ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಪುನಃ ಸರಿಪಡಿಸುವುದು ದೊಡ್ಡ ಸವಾಲಾಗಿತ್ತು.
ಇಂತಹ ಪ್ರತಿಕೂಲ ಹವಾಮಾನ, ಭೀಕರ ಪ್ರವಾಹ ಹಾಗೂ ಹಲವು ಸವಾಲುಗಳ ನಡುವೆಯೂ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡ ಈ ಇಬ್ಬರು ಸಿಬ್ಬಂದಿಗಳು, ತಮ್ಮ ಕರ್ತವ್ಯವನ್ನು ಕೇವಲ ಕೆಲಸವೆಂದು ಪರಿಗಣಿಸದೆ ಸೇವೆಯಾಗಿ ಸ್ವೀಕರಿಸಿ ದೂರದ ರಾಜ್ಯಕ್ಕೆ ತೆರಳಿ ವಿದ್ಯುತ್ ಮರುಸ್ಥಾಪನೆಗೆ ಶ್ರಮಿಸಿದ್ದಾರೆ.
ಸ್ವಂತ ಊರಿನಿಂದ ದೂರವಿದ್ದು, ಎಂಟು ದಿನಗಳ ಕಾಲ ನಿರಂತರವಾಗಿ ಶ್ರಮಿಸಿ ಆಂಧ್ರಪ್ರದೇಶದ ಜನರ ಬದುಕಿನಲ್ಲಿ ಮತ್ತೆ ವಿದ್ಯುತ್ ಬೆಳಕು ಮೂಡಿಸಲು ನೆರವಾದ ಬಾಳೇಶ್ ರುದ್ರಾಪುರ ಹಾಗೂ ರೇವಣಸಿದ್ದಪ್ಪ ಡಂಬಳ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ತವ್ಯನಿಷ್ಠೆ, ಮಾನವೀಯತೆ ಮತ್ತು ಸೇವಾ ಮನೋಭಾವಕ್ಕೆ ದಾಂಡೇಲಿಯ ಈ ಇಬ್ಬರು ಹೆಸ್ಕಾಂ ಸಿಬ್ಬಂದಿಗಳು ಮಾದರಿಯಾಗಿದ್ದಾರೆ.
