UK Express Logo
BREAKING

ಯಲ್ಲಾಪುರದಲ್ಲಿ ಒಂಟಿಮನೆ ದರೋಡೆ ಪ್ರಕರಣ ಭೇದಿಸಿದ ಪೊಲೀಸರು; ನಾಲ್ವರು ಆರೋಪಿಗಳ ಬಂಧನ

By UKExpress on 11/10/2026

ಯಲ್ಲಾಪುರ: ತಾಲೂಕಿನ ಹುಟ್ಕಮನೆಯಲ್ಲಿ ಒಂಟಿ ಮನೆಯೊಂದಕ್ಕೆ ನುಗ್ಗಿ ಚಾಕು ತೋರಿಸಿ ಮನೆಯವರನ್ನು ಬೆದರಿಸಿ ಚಿನ್ನಾಭರಣ, ನಗದು ಹಣ ಹಾಗೂ ಬೈಕ್ ದರೋಡೆ ಮಾಡಿದ್ದ ಪ್ರಕರಣವನ್ನು ಯಲ್ಲಾಪುರ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನವೆಂಬರ್ 5ರಂದು ರಾತ್ರಿ ಸುಮಾರು 8.30ರ ವೇಳೆಗೆ ಹುಟ್ಕಮನ ಗ್ರಾಮದ ಮೂಲೆಗುಂಡ್ಲಲ್ ನಿವಾಸಿ ರಾಮಚಂದ್ರ ಮಹಾಬಲೇಶ್ವರ ಭಟ್ಟ (63) ಅವರ ಮನೆಗೆ ನುಗ್ಗಿದ ದರೋಡೆಕೋರರು, ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿದ್ದರು. ಬಳಿಕ ರಾಮಚಂದ್ರ ಭಟ್ಟ ಹಾಗೂ ಅವರ ಮನೆಯವರಿಗೆ ಚಾಕು ತೋರಿಸಿ ಬೆದರಿಸಿ, ಮನೆಯಲ್ಲಿದ್ದ ಗೋಡ್ರೇಜ್ ಕಪಾಟಿನಲ್ಲಿನ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ದೋಚಿದ್ದರು.

ಸುಮಾರು 20 ಗ್ರಾಂ ತೂಕದ ಬಂಗಾರದ ಕರಿಮಣಿ ಸರ, ತಲಾ 10 ಗ್ರಾಂ ತೂಕದ ಎರಡು ಬಂಗಾರದ ಬಳೆಗಳು, 12 ಗ್ರಾಂ ತೂಕದ ಎರಡು ಜೊತೆ ಕಿವಿಯೋಲೆಗಳು, ಬಂಗಾರದ ಉಂಗುರ, ಲಾಕೆಟ್, ಎರಡು ಬೆಳ್ಳಿಯ ಬಟ್ಟಲುಗಳು, ಎರಡು ಕೈಗಡಿಯಾರಗಳು, ಸ್ಯಾಮ್‌ಸಂಗ್ ಮತ್ತು ವಿವೋ ಮೊಬೈಲ್‌ಗಳು, ₹12 ಸಾವಿರ ನಗದು ಹಾಗೂ ಟಿವಿಎಸ್ ಅಪಾಚೆ ಬೈಕ್ ಸೇರಿದಂತೆ ಹಲವು ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು.

ನವೆಂಬರ್ 9ರಂದು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಒಂಟಿಮನೆ ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಬಂಧಿತರನ್ನು ಹಸನ್‌ಸಾಬ ರಾಜೇಸಾಬ ಅಮೀನಗಡ (48), ಮುಬಾರಕ್ ಮಾಸಿಮ್ ಮಕಾನದಾರ (26), ಮಹಮ್ಮದ್ ಖಾಸಿಂ ಸುಭಾನಿ ದಂಡಿನವರ (38) ಹಾಗೂ ಅಬ್ಬಾಸಅಲಿ ಫೀರಸಾಬ ಮಕಾನದಾರ (50) ಎಂದು ಗುರುತಿಸಲಾಗಿದೆ. ಇವರಲ್ಲಿ ಹಸನ್‌ಸಾಬ ಬೆಳಗಾವಿಯ ನ್ಯೂ ಗಾಂಧಿನಗರ ನಿವಾಸಿಯಾಗಿದ್ದು, ಉಳಿದ ಮೂವರು ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದವರು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಬಿಳಿ ಬಣ್ಣದ ಫೋರ್ಡ್ ಕಾರು, ಹೀರೋ ಕಂಪನಿಯ ಮೋಟಾರ್ ಸೈಕಲ್, ದರೋಡೆ ಮಾಡಿದ್ದ ಟಿವಿಎಸ್ ಬೈಕ್, ಎರಡು ಮೊಬೈಲ್‌ಗಳು ಹಾಗೂ ಕಳವು ಮಾಡಿದ ಇತರೆ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುರೇಶ ಜಿ. ಕುಂಬಾರ ಹಾಗೂ ಗೋಕರ್ಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಈ ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ ಹಾಗೂ ಗಣಪತಿ ಆರ್. ಶೇರುಗಾರ ಭಾಗವಹಿಸಿದ್ದರು. ಅಂಕೋಲಾ ಪೊಲೀಸ್ ಠಾಣೆಯ ಮಹಮ್ಮದ್ ಶಫೀ ಶೇಖ್, ಮಹಾವೀರ ಡಿ.ಎಸ್., ಸಂತೋಷ ಬಾಳೇರ, ಬಸವರಾಜ ಡಿ.ಕೆ., ಶ್ರೀಕಾಂತ ಕಟಬರ್, ಮಾರುತಿ ಕೆ.ಎಚ್., ನಾಗರಾಜ ನಾಯ್ಕ, ಸುರೇಶ ಕಂಟ್ರ್ಯಾಕ್ಟರ್, ಪರಶುರಾಮ ದೊಡ್ಡನಿ, ಪರಮೇಶ್ವರ ಎಸ್.ಕೆ., ರಾಚಪ್ಪ ಧನಗರ್, ವಿಶ್ವನಾಥ ಜಾಯನಗೌಡ್ರ, ಮಹೇಶ ಸಾವಸಂಗಿ, ಗಂಗಾಧರ ಚಲವಾದಿ, ದಶರಥ ಹಾಗೂ ರೇಖಾ ಎಂ.ಎಸ್. ಅವರು ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾರವಾರದ ತಾಂತ್ರಿಕ ವಿಭಾಗದ ಉದಯ ಗುನಗ ಹಾಗೂ ಬಬನ್ ಕದಂ ಕೂಡ ಆರೋಪಿಗಳ ಪತ್ತೆ ಮತ್ತು ಬಂಧನಕ್ಕೆ ಸಹಕರಿಸಿದ್ದರು.

ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.