UK Express Logo
BREAKING

ಕೋಡಿಬಾಗ ಸೇತುವೆಯಿಂದ ಹಾರಲು ಯತ್ನಿಸಿದ ಮಹಿಳೆಯ ಜೀವ ಉಳಿಸಿದ ಪೊಲೀಸ್ ಸಿಬ್ಬಂದಿ

By UKExpress on 11/10/2026

ಕಾರವಾರ: ಆತ್ಮಹತ್ಯೆಗೆ ಯತ್ನಿಸಿ ಕೋಡಿಬಾಗ ಸೇತುವೆಯಿಂದ ನೀರಿಗೆ ಹಾರಲು ಮುಂದಾಗಿದ್ದ ಮಹಿಳೆಯೊಬ್ಬರನ್ನು ಪೊಲೀಸ್ ಸಿಬ್ಬಂದಿಯ ಸಮಯಪ್ರಜ್ಞೆ, ಧೈರ್ಯ ಹಾಗೂ ಮಾನವೀಯ ಕಾಳಜಿಯಿಂದ ರಕ್ಷಿಸಿದ ಘಟನೆ ನವೆಂಬರ್ 9ರಂದು ಬೆಳಿಗ್ಗೆ ನಡೆದಿದೆ.

ಮಲ್ಲಾಪುರ ಪೊಲೀಸ್ ಠಾಣೆಯ ಸಿ.ಎಚ್.ಸಿ. 1453 ಸಾಯಿನಂದ ವಿ. ನಾಯ್ಕ ಅವರು 112 ಇ.ಆರ್.ಎಸ್.ಎಸ್. ಕರ್ತವ್ಯ ನಿಮಿತ್ತ ಮಲ್ಲಾಪುರದಿಂದ ಕಾರವಾರಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಬೆಳಿಗ್ಗೆ ಸುಮಾರು 8.25ರ ವೇಳೆಗೆ ಕೋಡಿಬಾಗ ಸೇತುವೆಯ ಮೇಲೆ ಮಹಿಳೆಯೊಬ್ಬರು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿರುವುದನ್ನು ಗಮನಿಸಿದ್ದಾರೆ.

ತಕ್ಷಣವೇ ವಾಹನ ನಿಲ್ಲಿಸಿ ಮಹಿಳೆಯ ಬಳಿಗೆ ಧಾವಿಸಿದ ಅವರು, ಆಕೆಯನ್ನು ಹಿಡಿದುಕೊಂಡು ಸ್ಥಳದಲ್ಲಿದ್ದ ಸಾರ್ವಜನಿಕರ ನೆರವಿನೊಂದಿಗೆ ಸುರಕ್ಷಿತವಾಗಿ ಸೇತುವೆಯಿಂದ ಕೆಳಗಿಳಿಸಿದ್ದಾರೆ. ಬಳಿಕ ಮಹಿಳೆಗೆ ಧೈರ್ಯ ತುಂಬಿ ಸಮಾಧಾನಪಡಿಸಿದ್ದಾರೆ.

ನಂತರ ಸ್ಥಳಕ್ಕೆ ಆಗಮಿಸಿದ 112 ಇ.ಆರ್.ಎಸ್.ಎಸ್. ಸಿಬ್ಬಂದಿ ಸೇತುವೆಯ ಮೇಲೆ ಜಮಾಯಿಸಿದ್ದ ಜನರನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ನೊಂದ ಮಹಿಳೆಯನ್ನು 112 ವಾಹನದ ಮೂಲಕ ಕಾರವಾರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ತಮ್ಮ ಸಮಯಪ್ರಜ್ಞೆ, ಧೈರ್ಯ ಹಾಗೂ ಮಾನವೀಯ ಕಾಳಜಿಯಿಂದ ಅಮೂಲ್ಯ ಜೀವವೊಂದನ್ನು ಉಳಿಸಿದ ಸಾಯಿನಂದ ವಿ. ನಾಯ್ಕ ಹಾಗೂ 112 ಇ.ಆರ್.ಎಸ್.ಎಸ್. ಸಿಬ್ಬಂದಿ ಎ.ಹೆಚ್.ಸಿ. ದಿನೇಶ್ ನಾಗೇಕರ ಅವರ ಕರ್ತವ್ಯನಿಷ್ಠೆಯನ್ನು ಪೊಲೀಸ್ ಇಲಾಖೆ ಶ್ಲಾಘಿಸಿ ಅಭಿನಂದಿಸಿದೆ.

ಪೊಲೀಸ್ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.