ಗ್ರಾಮೀಣ ಕುಶಲಕರ್ಮಿಗಳಿಗೆ ಸಿಹಿಸುದ್ದಿ: ಉಚಿತ ಉಪಕರಣ, ₹10 ಸಾವಿರ ಸಹಾಯಧನಕ್ಕೆ ಅರ್ಜಿ ಆಹ್ವಾನ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿರುವ ಅರ್ಹ ಕುಶಲಕರ್ಮಿಗಳಿಗೆ ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಪಂಚಾಯತ್ ಕೈಗಾರಿಕಾ ವಿಭಾಗ, ಶಿರವಾಡ ವತಿಯಿಂದ ಸುಧಾರಿತ ಉಪಕರಣ ವಿತರಣೆ ಯೋಜನೆಯಡಿ ಬ್ಯೂಟಿ ಪಾರ್ಲರ್, ಗೌಂಡಿ, ಬಡಿಗೆತನ ಹಾಗೂ ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಅರ್ಹ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಚಾಲಿತ ಉಪಕರಣಗಳನ್ನು ವಿತರಿಸಲಾಗುತ್ತದೆ.
ಅದೇ ರೀತಿ ಜಿಲ್ಲಾ ಉದ್ಯಮ ಕೇಂದ್ರದ ಬಂಡವಾಳ ಹೂಡಿಕೆ ಸಹಾಯಧನ ಯೋಜನೆಯಡಿ ಸಿದ್ಧ ಉಡುಪು ತಯಾರಿಕೆ, ಕುಂಬಾರಿಕೆ, ಕ್ಷೌರಿಕ ವೃತ್ತಿ, ಚರ್ಮಗಾರಿಕೆ ಹಾಗೂ ಮರದ ಪೀಠೋಪಕರಣ ತಯಾರಿಕೆ ಸೇರಿದಂತೆ ವಿವಿಧ ಕಸುಬುಗಳಿಗೆ ಹಣಕಾಸು ಸಂಸ್ಥೆಗಳ ಮೂಲಕ ₹30 ಸಾವಿರ ಸಾಲ ಹಾಗೂ ₹10 ಸಾವಿರ ಸಹಾಯಧನ ನೀಡಲಾಗುತ್ತದೆ.
ಜಿಲ್ಲೆಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅರ್ಹ ಫಲಾನುಭವಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31.
ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು: https://zpuk.karnataka.gov.in/
ಆಸಕ್ತ ಅರ್ಹ ಫಲಾನುಭವಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕೆಂದು ಜಿಲ್ಲಾ ಪಂಚಾಯತ್ ಕೈಗಾರಿಕಾ ವಿಭಾಗದ ಉಪ ನಿರ್ದೇಶಕರು (ಗ್ರಾ.ಕೈ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
