
ಕಾರವಾರ: ಗಣಪತಿ ಮಂಟಪ ತರಲು ತೆರಳಿದ್ದ ವೇಳೆ ಕಾಳಿ ನದಿಯಲ್ಲಿ ದೋಣಿ ಮುಗುಚಿ ನಾಪತ್ತೆಯಾಗಿದ್ದ 62 ವರ್ಷದ ವ್ಯಕ್ತಿಯ ಮೃತದೇಹ ಸತತ ಏಳು ಗಂಟೆಗಳ ಶೋಧ ಕಾರ್ಯದ ಬಳಿಕ ಸೋಮವಾರ ಸಂಜೆ ಹಳಗಾದ ದೋಳ್ ಬಳಿ ಪತ್ತೆಯಾಗಿದೆ.
ಮೃತರನ್ನು ಸಿದ್ದರ ಗ್ರಾಮದ ಬಾಳಸು ವಿಶ್ರಾಮ ಆಚಾರಿ (62) ಎಂದು ಗುರುತಿಸಲಾಗಿದೆ.
ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣಪತಿ ಮಂಟಪ ತರಲು ಸಿದ್ದರ ಗ್ರಾಮದಿಂದ ಉಳಗ ಗ್ರಾಮಕ್ಕೆ ತೆರಳಿದ್ದ ಬಾಳಸು ಆಚಾರಿ, ದೋಣಿಯಲ್ಲಿ ಕಾಳಿ ನದಿ ದಾಟುತ್ತಿದ್ದ ವೇಳೆ ನದಿಯ ಮಧ್ಯಭಾಗದಲ್ಲಿ ದೋಣಿ ಮುಗುಚಿದ ಪರಿಣಾಮ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಈ ಘಟನೆ ಭಾನುವಾರ ಮಧ್ಯಾಹ್ನ ನಡೆದಿತ್ತು. ಸಂಜೆ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಗಿತ್ತು. ಕತ್ತಲಾದ ಕಾರಣ ತಕ್ಷಣ ಶೋಧ ಕಾರ್ಯ ನಡೆಸಲು ಸಾಧ್ಯವಾಗಿರಲಿಲ್ಲ.
ಡಿಎಫ್‌ಒ ಹಾಗೂ ತಹಸೀಲ್ದಾರ್ ಸೂಚನೆಯಂತೆ ಸೋಮವಾರ ಬೆಳಗ್ಗೆ 9.30ಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಶೋಧ ಕಾರ್ಯ ಆರಂಭಿಸಿದರು. ಕಾಳಿ ನದಿಯ ಎರಡೂ ದಡಗಳಲ್ಲಿ ಸುಮಾರು ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಶೋಧ ನಡೆಸಲಾಯಿತು. ದೋಣಿ ಮುಳುಗಿದ ಸ್ಥಳದಲ್ಲಿ ಸುಮಾರು 100 ಅಡಿ ಆಳದವರೆಗೆ ಪಾತಾಳ ಗರಡಿ ಬಳಸಿ ಶೋಧ ನಡೆಸಲಾಯಿತು. ಸ್ಥಳೀಯ ದೋಣಿ ಚಾಲಕರೂ ಕಾರ್ಯಾಚರಣೆಗೆ ಸಹಕರಿಸಿದರು.
ಮಧ್ಯಾಹ್ನ ನದಿಯಲ್ಲಿ ಸೋಫಾ ಚೇರ್ ಪತ್ತೆಯಾಗಿದ್ದು, ನೀರಿನ ಸೆಳೆತಕ್ಕೆ ಮೃತದೇಹ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರಿಗೂ ಮಾಹಿತಿ ನೀಡಲಾಗಿತ್ತು.
ಸತತ ಶೋಧದ ಬಳಿಕ ಸೋಮವಾರ ಸಂಜೆ ಹಳಗಾದ ದೋಳ್ ಬಳಿ ಬಾಳಸು ಆಚಾರಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಎಎಫ್‌ಒ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಎಸ್‌ಒ ಮಹಾಬಲೇಶ್ವರ ಗೌಡ, ಎಎಫ್‌ಒ ಶ್ರೀನಿವಾಸ್ ಪೂಜಾರಿ ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಬೋಟ್ ಚಾಲಕರು ಪಾಲ್ಗೊಂಡಿದ್ದರು. ಕದ್ರಾ ಪೊಲೀಸರು ಶೋಧ ಕಾರ್ಯಕ್ಕೆ ನೆರವು ನೀಡಿದರು.
ಘಟನೆ ಕದ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
